ಆಸೀಸ್​ಗೆ ಸತತ 7ನೇ ಜಯದ ನಿರೀಕ್ಷೆ; ಇಂದು ಪುಣೆಯಲ್ಲಿ ಬಾಂಗ್ಲಾ ಎದುರಾಳಿ

aus vs ban web
Published on

ಪುಣೆ: ಗ್ಲೆನ್​ ಮ್ಯಾಕ್ಸ್​ವೆಲ್​ ಅಜೇಯ ದ್ವಿಶತಕ ಸಾಧನೆಯ ಏಕಾಂಗಿ ಹೋರಾಟದ ಬಲದಿಂದ ಅಫ್ಘಾನಿಸ್ತಾನ ಎದುರು ಆಘಾತದಿಂದ ಪಾರಾಗಿ ಸೆಮಿಫೈನಲ್​ ಪ್ರವೇಶ ಖಚಿತಪಡಿಸಿಕೊಂಡಿರುವ ಆಸ್ಟ್ರೆಲಿಯಾ ತಂಡ ತನ್ನ 9ನೇ ಹಾಗೂ ಕೊನೇ ಲೀಗ್​ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧವೂ ಗೆದ್ದು ಲಯ ಕಾಯ್ದುಕೊಳ್ಳುವ ಹುರುಪಿನಲ್ಲಿದೆ. ಬಾಂಗ್ಲಾಗೆ 2025ರ ಚಾಂಪಿಯನ್ಸ್​ ಟ್ರೋಫಿ ಅರ್ಹತೆ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದಾಗಿದೆ.

ಐದು ಬಾರಿಯ ಚಾಂಪಿಯನ್​ ಆಸ್ಟ್ರೆಲಿಯಾ ಆರಂಭಿಕ 2 ಪಂದ್ಯಗಳಲ್ಲಿ ಸೋತ ಬಳಿಕ ಸತತ 6 ಗೆಲುವಿನೊಂದಿಗೆ ಬೀಗುತ್ತಿದ್ದು, ಗೆಲುವಿನ ಓಟವನ್ನು 7ನೇ ಪಂದ್ಯಕ್ಕೂ ವಿಸ್ತರಿಸುವ ಮೂಲಕ ಸೆಮಿಫೈನಲ್​ಗೆ ಮುನ್ನ ಲಯ ಕಾಯ್ದುಕೊಳ್ಳುವ ಉತ್ಸಾಹದಲ್ಲಿದೆ. ಆದರೂ ಬ್ಯಾಟಿಂಗ್​ ವಿಭಾಗದ ಅಸ್ಥಿರ ನಿರ್ವಹಣೆ ಈಗಲೂ ಆಸೀಸ್​ ಪಾಲಿಗೆ ತಲೆನೋವಾಗಿಯೇ ಉಳಿದಿದೆ. ಒಂದು ವೇಳೆ ಆಫ್ಘನ್​ ಎದುರು ಸೋತಿದ್ದರೆ ಆಸೀಸ್​ ಪಾಲಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿರುತಿತ್ತು.

ಮತ್ತೊಂದೆಡೆ ಬಾಂಗ್ಲಾ, ಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರಿಂದ ಚಾಂಪಿಯನ್ಸ್​ ಟ್ರೋಫಿ ಅರ್ಹತೆ ಆಸೆ ಜೀವಂತ ಉಳಿಸಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ಸೋತರೂ, ರನ್​ರೇಟ್​ ಶ್ರೀಲಂಕಾಕ್ಕಿಂತ ಕೆಳಗೆ ಕುಸಿಯದಂತೆ ಬಾಂಗ್ಲಾ ನೋಡಿಕೊಳ್ಳಬೇಕಾಗಿದೆ. ಭಾರಿ ಅಂತರದಿಂದ ಸೋತರೆ ಬಾಂಗ್ಲಾ ಅಂಕಪಟ್ಟಿಯಲ್ಲಿ 9 ಅಥವಾ 10ನೇ ಸ್ಥಾನಕ್ಕಿಳಿದು ಚಾಂಪಿಯನ್ಸ್​ ಟ್ರೋಫಿ ಅರ್ಹತೆ ತಪ್ಪಿಸಿಕೊಳ್ಳುವ ಭೀತಿ ಇದೆ. ನಾಯಕ ಶಕೀಬ್​ ಅಲ್​ ಹಸನ್​ ಗಾಯದಿಂದಾಗಿ ಅಲಭ್ಯರಾಗಿರುವುದು ಕೂಡ ಬಾಂಗ್ಲಾಗೆ ಹಿನ್ನಡೆ ಎನಿಸಿದೆ.

ಏಕದಿನ ಮುಖಾಮುಖಿ: 21

ಆಸೀಸ್​: 19, ಬಾಂಗ್ಲಾ: 1, ರದ್ದು: 1

ವಿಶ್ವಕಪ್​ ಮುಖಾಮುಖಿ: 3

ಆಸೀಸ್​: 3, ಬಾಂಗ್ಲಾ: 0

ಆರಂಭ: ಬೆಳಗ್ಗೆ 10.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net