

ಬೆಂಗಳೂರು: ತವರಿನ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸತತ 8 ಗೆಲುವಿನೊಂದಿಗೆ ಅಜೇಯವಾಗಿ ಮುನ್ನುಗ್ಗುತ್ತಿರುವ ನಡುವೆ ಐಸಿಸಿ ರ್ಯಾಂಕಿಂಗ್ನಲ್ಲೂ ಭಾರತೀಯರು ಪಾರುಪತ್ಯ ಸಾಧಿಸಿದ್ದಾರೆ. ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಆರಂಭಿಕ ಶುಭಮಾನ್ ಗಿಲ್ ಮೊಟ್ಟಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ ಸಾಧನೆ ಮಾಡಿದ್ದರೆ, ಬೌಲಿಂಗ್ ರ್ಯಾಂಕಿಂಗ್ನಲ್ಲಿ ವೇಗಿ ಮೊಹಮದ್ ಸಿರಾಜ್ ವಿಶ್ವ ನಂ. 1 ಪಟ್ಟಕ್ಕೆ ಮರಳಿದ್ದಾರೆ. ಇಬ್ಬರೂ ಪಾಕಿಸ್ತಾನದ ಆಟಗಾರರನ್ನು ಹಿಮ್ಮೆಟ್ಟಿಸಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.
ವಿಶ್ವಕಪ್ ಶುರುವಾದ ಆರಂಭದಲ್ಲೇ ಗಿಲ್ ನಂ. 1 ಪಟ್ಟಕ್ಕೇರುವ ಅವಕಾಶ ಹೊಂದಿದ್ದರು. ಆದರೆ ಡೆಂಘೆ ಜ್ವರದಿಂದ ಆರಂಭಿಕ 2 ಪಂದ್ಯ ತಪ್ಪಿಸಿಕೊಂಡಿದ್ದರಿಂದ ಅವರಿಗೆ ಹಿನ್ನಡೆಯಾಗಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 92 ರನ್ ಸಿಡಿಸಿದ ಸಾಧನೆಯಿಂದ 24 ವರ್ಷದ ಗಿಲ್ (830 ಅಂಕ) ಕೊನೆಗೂ ಪಾಕಿಸ್ತಾನದ ನಾಯಕ ಬಾಬರ್ ಅಜಮ್ರನ್ನು (824 ಅಂಕ) ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಕಳೆದ ಎರಡೂವರೆ ವರ್ಷಕ್ಕೂ (951 ದಿನ) ಅಧಿಕ ಸಮಯದಿಂದ ಅಗ್ರಸ್ಥಾನದಲ್ಲಿದ್ದ ಬಾಬರ್ ಈಗ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಗಿಲ್ ವಿಶ್ವಕಪ್ನಲ್ಲಿ ಇದುವರೆಗೆ ಆಡಿದ 6 ಇನಿಂಗ್ಸ್ಗಳಿಂದ 219 ರನ್ ಕಲೆಹಾಕಿದ್ದರೆ, ಬಾಬರ್ 8 ಇನಿಂಗ್ಸ್ಗಳಿಂದ 282 ರನ್ ಕಲೆಹಾಕಿದ್ದಾರೆ. ಗಿಲ್ ಹಾಲಿ ವರ್ಷ ಆಡಿರುವ 26 ಏಕದಿನ ಪಂದ್ಯಗಳಲ್ಲಿ 4 ಶತಕಗಳ (1 ದ್ವಿಶತಕ) ಸಹಿತ 63ರ ಸರಾಸರಿಯಲ್ಲಿ 1,449 ರನ್ ಬಾರಿಸಿದ್ದಾರೆ.
ಕೊಹ್ಲಿಗೂ ಬಡ್ತಿ: ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತದಲ್ಲಿ 49ನೇ ಶತಕ ಸಿಡಿಸಿ ವಿಜೃಂಭಿಸಿದ ವಿರಾಟ್ ಕೊಹ್ಲಿ ಕೂಡ ರ್ಯಾಂಕಿಂಗ್ನಲ್ಲಿ ಬಡ್ತಿ ಪಡೆದಿದ್ದು, 4ನೇ ಸ್ಥಾನಕ್ಕೇರಿದ್ದಾರೆ. ನಾಯಕ ರೋಹಿತ್ ಶರ್ಮ 6ನೇ ಸ್ಥಾನಕ್ಕೇರಿದ್ದಾರೆ. ವಿಶ್ವಕಪ್ನ ಟಾಪ್ ಸ್ಕೋರರ್ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್ 3ನೇ ಸ್ಥಾನದಲ್ಲಿದ್ದಾರೆ.
ಅಗ್ರಸ್ಥಾನಕ್ಕೆ ಮರಳಿದ ಸಿರಾಜ್
ವಿಶ್ವಕಪ್ನಲ್ಲಿ ಇದುವರೆಗೆ 10 ವಿಕೆಟ್ ಕಬಳಿಸಿರುವ ಮೊಹಮದ್ ಸಿರಾಜ್ ಕೆಲ ವಾರಗಳ ಬಳಿಕ ಮತ್ತೆ ವಿಶ್ವ ನಂ. 1 ಬೌಲರ್ ಪಟ್ಟಕ್ಕೆ ಮರಳಿದ್ದಾರೆ. ಪಾಕಿಸ್ತಾನದ ವೇಗಿ ಶಹೀನ್ ಷಾ ಅಫ್ರಿದಿ ಅವರನ್ನು ಹಿಂದಿಕ್ಕಿ ಸಿರಾಜ್ ಈ ಸಾಧನೆ ಮಾಡಿದ್ದಾರೆ. ಕಳೆದ ವಾರ 3ನೇ ಸ್ಥಾನಕ್ಕೆ ಕುಸಿದಿದ್ದ ಸಿರಾಜ್, ಲಂಕಾ-ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಒಟ್ಟು 4 ವಿಕೆಟ್ ಕಬಳಿಸಿದ ಸಾಧನೆಯಿಂದ ಅಗ್ರಸ್ಥಾನಕ್ಕೆ ಮರಳಿದ್ದರೆ, ಅಫ್ರಿದಿ 5ನೇ ಸ್ಥಾನಕ್ಕಿಳಿದಿದ್ದಾರೆ. ಸ್ಪಿನ್ನರ್ಗಳಾದ ಕೇಶವ್ ಮಹಾರಾಜ್, ಆಡಂ ಜಂಪಾ ಮತ್ತು ಕುಲದೀಪ್ ಯಾದವ್ ಕ್ರಮವಾಗಿ 2, 3, 4ನೇ ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ 8 ಮತ್ತು ಮೊಹಮದ್ ಶಮಿ 10ನೇ ಸ್ಥಾನಕ್ಕೇರಿದ್ದು, ಅಗ್ರ 10ರಲ್ಲಿ ಭಾರತದ ನಾಲ್ವರು ಬೌಲರ್ಗಳು ಸ್ಥಾನ ಪಡೆದಂತಾಗಿದೆ.
4: ಶುಭಮಾನ್ ಗಿಲ್ ಏಕದಿನ ರ್ಯಾಂಕಿಂಗ್ನಲ್ಲಿ ನಂ. 1 ಪಟ್ಟಕ್ಕೇರಿದ 4ನೇ ಭಾರತೀಯ ಬ್ಯಾಟರ್ ಆಗಿದ್ದಾರೆ. ಸಚಿನ್ ತೆಂಡುಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮೊದಲ ಮೂವರು.
41: ಶುಭಮಾನ್ ಗಿಲ್ (41 ಇನಿಂಗ್ಸ್) ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ನಂ. 1 ಪಟ್ಟಕ್ಕೇರಿದ ಭಾರತದ 2ನೇ ಅತಿವೇಗದ ಸಾಧಕರಾಗಿದ್ದಾರೆ. ಎಂಎಸ್ ಧೋನಿ 38 ಇನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿದ್ದು ದಾಖಲೆ.
*ನಂ. 1 ಭಾರತೀಯರು
ಏಕದಿನ ಬ್ಯಾಟಿಂಗ್: ಶುಭಮಾನ್ ಗಿಲ್
ಏಕದಿನ ಬೌಲಿಂಗ್: ಮೊಹಮದ್ ಸಿರಾಜ್
ಟಿ20 ಬ್ಯಾಟಿಂಗ್: ಸೂರ್ಯಕುಮಾರ್
ಟೆಸ್ಟ್ ಬೌಲಿಂಗ್: ಆರ್. ಅಶ್ವಿನ್
ಟೆಸ್ಟ್ ಆಲ್ರೌಂಡರ್: ರವೀಂದ್ರ ಜಡೇಜಾ
ಟೆಸ್ಟ್, ಏಕದಿನ, ಟಿ20 ತಂಡ ರ‍್ಯಾಂಕಿಂಗ್: ಭಾರತ