ಪಾಕಿಸ್ತಾನ ನೆಲದಲ್ಲಿ ಗೆದ್ದ ರಾಮ್​ಕುಮಾರ್​, ಶ್ರೀರಾಮ್​; ಡೇವಿಸ್​ ಕಪ್​ನಲ್ಲಿ ಭಾರತಕ್ಕೆ 2-0 ಮುನ್ನಡೆ

davis web
Published on

ಇಸ್ಲಾಮಾಬಾದ್​: ರಾಮ್​ಕುಮಾರ್​ ರಾಮನಾಥನ್​ ಮತ್ತು ಎನ್​. ಶ್ರೀರಾಮ್​ ಬಾಲಾಜಿ ಮೊದಲ ದಿನದ ಎರಡೂ ಸಿಂಗಲ್ಸ್​ ಪಂದ್ಯಗಳಲ್ಲಿ ಗೆಲುವು ದಾಖಲಿಸುವುದರೊಂದಿಗೆ ಡೇವಿಸ್​ ಕಪ್​ ವಿಶ್ವ ಗುಂಪು-1ರ ಪ್ಲೇಆಫ್​ ಮುಖಾಮುಖಿಯಲ್ಲಿ ಆತಿಥೇಯ ಪಾಕಿಸ್ತಾನ ಎದುರು 2-0 ಮುನ್ನಡೆ ತಂದುಕೊಟ್ಟಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ನೆಲದಲ್ಲಿ 60 ವರ್ಷಗಳ ಬಳಿಕ ಆಡುತ್ತಿರುವ ಭಾರತ ಟೆನಿಸ್​ ತಂಡ, ಐತಿಹಾಸಿಕ ಗೆಲುವಿನತ್ತ ಮುನ್ನಡೆದಿದೆ.

ಪಾಕಿಸ್ತಾನದ ಅನುಭವಿ ಆಟಗಾರ ಐಸಾಮ್​ ಉಲ್​ ಹಕ್​ ಖುರೇಷಿ ವಿರುದ್ಧ ನಡೆದ ಶನಿವಾರದ ಮೊದಲ ಸಿಂಗಲ್ಸ್​ ಪಂದ್ಯದಲ್ಲಿ ರಾಮ್​ಕುಮಾರ್​ ಕಠಿಣ ಪ್ರತಿರೋಧ ಎದುರಿಸಿದರು. ರಾಮ್​ಕುಮಾರ್​ ಮೊದಲ ಸೆಟ್​ ಸೋತಾಗ ಭಾರತಕ್ಕೆ ಆಘಾತ ಎದುರಾಗುವ ಭೀತಿಯೂ ಹುಟ್ಟಿತ್ತು. ಆದರೆ 2ನೇ ಸೆಟ್​ನಲ್ಲಿ ದಿಟ್ಟ ತಿರುಗೇಟು ನೀಡಿದ ರಾಮ್​ಕುಮಾರ್​ ನಿರ್ಣಾಯಕ ಸೆಟ್​ನಲ್ಲಿ ಸುಲಭವಾಗಿ ಗೆಲ್ಲುವುದರೊಂದಿಗೆ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇಸ್ಲಾಮಾಬಾದ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನ ಗ್ರಾಸ್​ ಕೋರ್ಟ್​ನಲ್ಲಿ ಕಾದಾಟದಲ್ಲಿ 43 ವರ್ಷದ ಐಸಾಮ್​ ಎದುರು ರಾಮ್​ಕುಮಾರ್​ 6-7, 7-6, 6-0ಯಿಂದ ಗೆಲುವು ಸಾಧಿಸಿದರು. 10 ಡಬಲ್​ ಫಾಲ್ಟ್​ಗಳು ಐಸಾಮ್​ಗೆ ದುಬಾರಿಯಾದವು. ಮತ್ತೊಂದೆಡೆ ರಾಮ್​ಕುಮಾರ್​ ಬಲಿಷ್ಠ ಸರ್ವ್​ ಮೂಲಕ ಮೇಲುಗೈ ಸಾಧಿಸಿದರು.

ದಿನದ 2ನೇ ಸಿಂಗಲ್ಸ್​ ಪಂದ್ಯದಲ್ಲಿ ಎನ್​. ಶ್ರೀರಾಮ್​ ಬಾಲಾಜಿ 7-5, 6-3 ನೇರಸೆಟ್​ಗಳಿಂದ ಅಕೀಲ್​ ಖಾನ್​ ಎದುರು ಸುಲಭ ಗೆಲುವು ಸಾಧಿಸಿ ಭಾರತದ ಮುನ್ನಡೆ ಹಿಗ್ಗಿಸಿದರು. ಮಳೆ ನಡುವೆ ನಡೆದ ಈ ಪಂದ್ಯದಲ್ಲಿ ಶ್ರೀರಾಮ್​ ಹೆಚ್ಚಿನ ಪ್ರತಿರೋಧವಿಲ್ಲದೆ ಗೆದ್ದರು. ಡಬಲ್ಸ್​ ಆಟಗಾರನಾಗಿದ್ದರೂ, ಹುಲ್ಲುಹಾಸಿನ ಅಂಗಣದಲ್ಲಿ ಅವರಿಗೆ ಇರುವ ಅನುಭವವನ್ನು ಗಮನದಲ್ಲಿಟ್ಟುಕೊಂಡು ಸಿಂಗಲ್ಸ್​ನಲ್ಲಿ ಕಣಕ್ಕಿಳಿಸಿದ ಭಾರತದ ಲೆಕ್ಕಾಚಾರ ಫಲಿಸಿತು.

ಭಾನುವಾರ ನಡೆಯಲಿರುವ ಡಬಲ್ಸ್​ ಪಂದ್ಯದಲ್ಲಿ ಯೂಕಿ ಭಾಂಬ್ರಿ-ಸಾಕೇತ್​ ಮೈನೇನಿ ಜೋಡಿ ಗೆದ್ದರೆ ಭಾರತ ವಿಶ್ವ ಗುಂಪು-1ರಲ್ಲಿ ಉಳಿಯುವುದು ಖಚಿತವೆನಿಸಲಿದೆ. ಇಲ್ಲದಿದ್ದರೆ, ಕೊನೇ 2 ರಿವರ್ಸ್​ ಸಿಂಗಲ್ಸ್​ಗಳಲ್ಲಿ ಒಂದರಲ್ಲಾದರೂ ಗೆಲ್ಲಬೇಕಾಗುತ್ತದೆ.

ಇಂದಿನ ಪಂದ್ಯಗಳು (ಆರಂಭ: ಬೆಳಗ್ಗೆ 11.30)

*ಯೂಕಿ, ಸಾಕೇತ್​ Vs ಮುರ್ತಜ, ರ್ಬಕತ್​

*ರಾಮ್​ಕುಮಾರ್​ Vs ಅಕೀಲ್​ ಖಾನ್​

*ಶ್ರೀರಾಮ್​ Vs ಐಸಾಮ್​ ಉಲ್​ ಹಕ್​

*ನನ್ನ ಪಾಲಿಗೆ ಇದು ನಿಜವಾಗಿಯೂ ವಿಶೇಷವಾದ ಗೆಲುವಾಗಿದೆ. ಪಾಕಿಸ್ತಾನದ ನೆಲದಲ್ಲಿ ಈ ಗೆಲುವು ಬಂದಿದೆ. ದೇಶದಿಂದ ಹೊರಗೆ ಗೆಲ್ಲುವುದು ಸುಲಭವಲ್ಲ.

|ರಾಮ್​ಕುಮಾರ್​ ರಾಮನಾಥನ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net