ಐಪಿಎಲ್​ ತಂಡಕ್ಕೆ ಸ್ಯಾನಿಟರಿ​ ಪ್ಯಾಡ್​ ಪ್ರಾಯೋಜಕತ್ವ, ಸಾಮಾಜಿಕ ಬದಲಾವಣೆಯ ಗುರಿ

ipl rr
Published on

ಜೈಪುರ: ವಿವಿಧ ಬ್ರಾಂಡ್​ಗಳ ಪ್ರಚಾರಕ್ಕೆ ವಿಶ್ವದ ಶ್ರೀಮಂತ ಟಿ20 ಲೀಗ್​ ಐಪಿಎಲ್​ ಟೂರ್ನಿ ಈಗಾಗಲೆ ದೊಡ್ಡ ವೇದಿಕೆಯಾಗಿ ಬಳಕೆಯಾಗಿದೆ. ಸಿಮೆಂಟ್​ನಿಂದ ಸಾಫ್ಟ್​ವೇರ್​ ಡ್ರಿಂಕ್ಸ್​, ಶೂನಿಂದ ಕಾಂಡೋಮ್​ನವರೆಗೆ ವಿವಿಧ ಬ್ರಾಂಡ್​ಗಳು ಐಪಿಎಲ್​ನಲ್ಲಿ ಉತ್ತಮ ಪ್ರಚಾರವನ್ನು ಪಡೆದುಕೊಂಡಿವೆ. ಇದೀಗ ಈ ಪಟ್ಟಿಗೆ ಹೊಸ ವಸ್ತುವೊಂದು ಸೇರ್ಪಡೆಯಾಗುತ್ತಿದೆ. ಅದುವೇ ಸ್ಯಾನಿಟರಿ ಪ್ಯಾಡ್​. ಮಹಿಳೆಯರ ಮುಟ್ಟಿನ ಸಮಸ್ಯೆಗಳ ಬಗ್ಗೆ ಪುರುಷರಿಗೂ ಅರಿವು ಮೂಡಿಸುವ ಮೂಲಕ ಹೊಸ ಸಾಮಾಜಿಕ ಬದಲಾವಣೆಯನ್ನು ತರುವುದು ಇದರ ಹಿಂದಿನ ಗುರಿಯಾಗಿದೆ.

ಮಾಜಿ ಚಾಂಪಿಯನ್​ ರಾಜಸ್ಥಾನ ರಾಯಲ್ಸ್​ ತಂಡ ಐಪಿಎಲ್​ 13ನೇ ಆವೃತ್ತಿಗೆ ಸ್ಯಾನಿಟರಿ ಪ್ಯಾಡ್​ ಬ್ರಾಂಡ್​ 'ನೈನ್​' (ಎನ್​ಐಐಎನ್​ಇ)ಜತೆಗೆ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದಾಗಿ ತಂಡದ ಪ್ರಮುಖ ಆಟಗಾರರಾಗಿರುವ ಆಸ್ಟ್ರೇಲಿಯಾದ ಸ್ಟೀವನ್​ ಸ್ಮಿತ್​, ಇಂಗ್ಲೆಂಡ್​ನ ಬೆನ್​ ಸ್ಟೋಕ್ಸ್​, ಜೋಫ್ರಾ ಆರ್ಚರ್​ ಕೂಡ ಸ್ಯಾನಿಟರಿ ಪ್ಯಾಡ್​ ಬ್ರಾಂಡ್​ನ ಹೆಸರು ಹೊಂದಿರುವ ಜೆರ್ಸಿ ಧರಿಸಿ ಆಡಲಿದ್ದಾರೆ. ಆಟಗಾರರ ಜೆರ್ಸಿಯ ಬೆನ್ನಹಿಂದೆ ಈ ಬ್ರಾಂಡ್​ನ ಹೆಸರು ಇರಲಿದೆ.

ಗ್ರಾಮೀಣ ಭಾಗಗಳಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಸಾಮಾಜಿಕ ಪ್ರತಿಬಂಧನಗಳು ಈಗಲೂ ಮುಂದುವರಿದಿರುವ ನಡುವೆ, ಐಪಿಎಲ್​ ತಂಡದ ಮೂಲಕ ಸಾಮಾಜಿಕ ಬದಲಾವಣೆ ತರುವುದು ಈ ಒಪ್ಪಂದದ ಉದ್ದೇಶವಾಗಿದೆ. 'ನಿಸ್ಸಂಶಯವಾಗಿ ಕ್ರಿಕೆಟ್​ ದೇಶದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸುವ ಕ್ರೀಡೆಯಾಗಿದೆ. ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ತೋರಲು ಮತ್ತು ಹೊಸ ಸಾಮಾಜಿಕ ಬದಲಾವಣೆ ತರಲು ಐಪಿಎಲ್​ ಟೂರ್ನಿ ಉತ್ತಮ ವೇದಿಕೆಯಾಗಿ ಬಳಕೆಯಾಗಲಿದೆ. ಮಹಿಳೆಯರ ಮುಟ್ಟಿನ ಸಮಸ್ಯೆಗಳ ಬಗ್ಗೆ ಪುರುಷರಿಗೆ ಶಿಕ್ಷಣ ನೀಡಲು ಪ್ರಯತ್ನಿಸಲಿದ್ದೇವೆ' ಎಂದು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಒಪ್ಪಂದದ ಮೊತ್ತದ ಬಗ್ಗೆ ವಿವರಗಳನ್ನು ಬಿಟ್ಟುಕೊಡಲು ಫ್ರಾಂಚೈಸಿ ನಿರಾಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net