58 ರನ್‌ಗಳ ಹೀನಾಯ ಸೋಲು! ಸೋಲಿನ ಬೆನ್ನಲ್ಲೇ ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಕ್ಯಾಪ್ಟನ್​ ಸಂಜು ಸ್ಯಾಮ್ಸನ್​ | Rajasthan Royals

ವಿಜಯವಾಣಿ - 2025-04-10T110115.109
Published on

Rajasthan Royals: ನಿನ್ನೆ (ಏ.09) ನಡೆದ ಐಪಿಎಲ್​ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನೀಡಿದ್ದ 218 ರನ್​ಗಳ ಬೃಹತ್​ ಗುರಿಯನ್ನು ಬೆನ್ನಟ್ಟಲು ವಿಫಲಗೊಂಡ ಸಂಜು ಸ್ಯಾಮ್ಸನ್​ ನೇತೃತ್ವದ ರಾಜಸ್ಥಾನ ರಾಯಲ್ಸ್ ಪಡೆ, ಕೇವಲ 159 ರನ್​ಗಳಿಗೆ ಆಲ್​ಔಟ್ ಆಗುವ ಮೂಲಕ ಭಾರೀ ಮುಖಭಂಗ ಅನುಭವಿಸಿತು. ತಂಡದ ಪರ ಮಿಂಚಬೇಕಿದ್ದ ಸ್ಟಾರ್ ಆಟಗಾರರೇ ಬಹುಬೇಗನೇ ವಿಕೆಟ್​ ಕಳೆದುಕೊಂಡಿದ್ದು, ಕ್ರಿಕೆಟ್​ ಪ್ರೇಮಿಗಳ ಬೇಸರಕ್ಕೆ ಕಾರಣವಾಯಿತು.

ಆಡಿರುವ ಐದು ಪಂದ್ಯಗಳಲ್ಲಿ ಎರಡು ಗೆದ್ದು ಮೂರರಲ್ಲಿ ಸೋಲುಂಡಿರುವ ರಾಜಸ್ಥಾನ್ ರಾಯಲ್ಸ್, ನಿನ್ನೆಯ ಪಂದ್ಯದಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಇನ್ನು ಪಂದ್ಯ ಸೋತ ಬೆನ್ನಲ್ಲೇ ಭಾರೀ ಬೇಸರದಲ್ಲಿ ಪೆವಿಲಿಯನ್​ನತ್ತ ಸಾಗಿದ ಕ್ಯಾಪ್ಟನ್​ ಸಂಜು ಸ್ಯಾಮ್ಸನ್, ಸೋಲಿನ ರುಚಿಯೊಂದಿಗೆ ಮಂದಗತಿಯ ಓವರ್ ಕಾಯ್ದುಕೊಂಡಿದ್ದಕ್ಕಾಗಿ ಬರೋಬ್ಬರಿ 24 ಲಕ್ಷ ರೂ. ದಂಡವನ್ನೂ ಸ್ವೀಕರಿಸಿದರು.

58 ರನ್‌ಗಳ ಸೋಲಿನಿಂದ ಐಪಿಎಲ್​ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಗಿದ ಆರ್‌ಆರ್‌, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ಪಡೆಯಿತು. 2025ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಮಾಡಿದ ಎರಡನೇ ಮಂದಗತಿಯ ಓವರ್ ಇದಾಗಿದೆ. ಹೀಗಾಗಿ ಬಿಸಿಸಿಐ ಬರೋಬ್ಬರಿ 24 ಲಕ್ಷ ರೂ. ದಂಡವನ್ನು ಕ್ಯಾಪ್ಟನ್ ಸಂಜು ಸ್ಯಾಮ್ಸನ್​ಗೆ ವಿಧಿಸಿತು. ಇದೇ ಬೇಸರದಲ್ಲಿ ಮಾತನಾಡಿದ ಸ್ಯಾಮ್ಸನ್​, ತಂಡದ ಸೋಲಿಗೆ ಕಾರಣವನ್ನೂ ಬಹಿರಂಗಪಡಿಸಿದರು.

"ನಾವು ಬೌಲಿಂಗ್‌ನಲ್ಲಿ 15-20 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟೆವು. ನಮಗೆ ವೇಗದ ಅಗತ್ಯವಿದ್ದಾಗ, ಹೆಚ್ಚುವರಿ ವಿಕೆಟ್‌ಗಳನ್ನು ಕಳೆದುಕೊಂಡೆವು. ಶಿಮ್ರಾನ್ ಹೆಟ್ಮೈಯರ್ ಅವರಿಂದ ಸಿಕ್ಸರ್​ ಮತ್ತು ಬೌಂಡರಿಗಳು ಬರುತ್ತಲೇ ಇದ್ದವು. ಆದರೆ, ನಾನು ನನ್ನ ವಿಕೆಟ್ ಕಳೆದುಕೊಂಡೆ. ಅಷ್ಟರೊಳಗೆ ನಾವು ಪಂದ್ಯವನ್ನು ಕಳೆದುಕೊಂಡಿದ್ದೆವು. ಆರಂಭದಲ್ಲೇ ಜಿಟಿ ಬ್ಯಾಟರ್​ ಶುಭಮನ್ ಗಿಲ್​ ವಿಕೆಟ್​ ಪಡೆದಿದ್ದು ಅದ್ಭುತವಾಗಿತ್ತು. ಆದರೆ, ಅಂತಿಮವಾಗಿ ಸೋಲು ಅನುಭವಿಸಿದೆವು" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net