ಟೀಮ್​ ಇಂಡಿಯಾಗಿಂತ ಸಿಎಸ್​ಕೆ ಪರ ರೈನಾ ಹೆಚ್ಚು ಮಿಂಚಿರುವುದೇಕೆ? ಕಾರಣ ನೀಡಿದ ದ್ರಾವಿಡ್​!

raina csk team india
Published on

ನವದೆಹಲಿ: ಇತ್ತೀಚೆಗೆ ನಿವೃತ್ತಿ ಹೊಂದಿದ ಟೀಮ್​ ಇಂಡಿಯಾ ಎಡಗೈ ಬ್ಯಾಟ್ಸ್​ಮನ್​ ಸುರೇಶ್​ ರೈನಾ ಅವರ ವೃತ್ತಿಜೀವನವನ್ನು ದಿಗ್ಗಜ ರಾಹುಲ್​ ದ್ರಾವಿಡ್​ ಶ್ಲಾಘಿಸಿದ್ದಾರೆ. ಸೀಮಿತ ಓವರ್​ ಕ್ರಿಕೆಟ್​ನಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಸುರೇಶ್​ ರೈನಾ ಅವರ ಪಾತ್ರವೂ ಪ್ರಮುಖವಾದುದು ಎಂದು ದ್ರಾವಿಡ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಸುರೇಶ್​ ರೈನಾ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ್ದರೆ ವೃತ್ತಿಜೀವನದಲ್ಲಿ ಇನ್ನಷ್ಟು ಹೆಚ್ಚು ರನ್​ ಗಳಿಸುತ್ತಿದ್ದರು. ಆದರೆ ಅವರು ಅಮೋಘ ಟೀಮ್​ ಮ್ಯಾನ್​ ಆಗಿ ಉಳಿದರು ಎಂದು ದ್ರಾವಿಡ್​ ಪ್ರಶಂಸಿಸಿದ್ದಾರೆ.

ಮಾಜಿ ನಾಯಕ ಎಂಎಸ್​ ಧೋನಿ ನಿವೃತ್ತಿಯ ಬೆನ್ನಲ್ಲೇ ಶನಿವಾರ 33 ವರ್ಷದ ಸುರೇಶ್​ ರೈನಾ ಕೂಡ ನಿವೃತ್ತಿ ಘೋಷಿಸಿದ್ದರು. ರೈನಾ ಅವರಿಗೆ ಏಕದಿನ ಮತ್ತು ಟೆಸ್ಟ್​ ತಂಡದ ಕ್ಯಾಪ್​ ನೀಡಿದ್ದ ದ್ರಾವಿಡ್​, ಬಿಸಿಸಿಐ ಟ್ವಿಟರ್​ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ರೈನಾ ಗುಣಗಾನ ಮಾಡಿದ್ದಾರೆ. 'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ರೈನಾ ಮೇಲಿನ ಕ್ರಮಾಂಕದಲ್ಲಿ ಆಡಿದ್ದರೆ ಅವರ ಅಂಕಿ-ಅಂಶಗಳು ಇನ್ನಷ್ಟು ಉತ್ತಮವಾಗಿರುತ್ತಿದ್ದವು. ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಪರ ಮೇಲಿನ ಕ್ರಮಾಂಕದಲ್ಲಿ ಆಡಿರುವುದರಿಂದಲೇ ಅವರು ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಸಿಎಸ್​ಕೆ ತಂಡದಲ್ಲಿ ಅವರು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೆ. ಹೀಗಾಗಿಯೇ ಐಪಿಎಲ್​ನಲ್ಲಿ ಅವರು ಹೆಚ್ಚಿನ ರನ್​ ಹರಿಸಿದ್ದಾರೆ' ಎಂದು ದ್ರಾವಿಡ್​ ವಿವರಿಸಿದ್ದಾರೆ. ಐಪಿಎಲ್​ನಲ್ಲಿ ರೈನಾ 193 ಪಂದ್ಯಗಳಲ್ಲಿ 5,368 ರನ್​ ಬಾರಿಸಿದ್ದಾರೆ.

'ಕಳೆದ ಒಂದೂವರೆ ದಶಕದಲ್ಲಿ ಭಾರತ ತಂಡ ಏಕದಿನ, ಟಿ20 ಕ್ರಿಕೆಟ್​ನಲ್ಲಿ ಕಂಡ ಯಶಸ್ಸಿನಲ್ಲಿ ರೈನಾ ಪಾತ್ರವೂ ಪ್ರಮುಖವಾದುದು. ಅವರು ವಿಶ್ವಕಪ್​ ಮತ್ತು ಚಾಂಪಿಯನ್ಸ್​ ಟ್ರೋಫಿ ವಿಜೇತರು. ಫೀಲ್ಡಿಂಗ್​ನಲ್ಲೂ ಅವರ ಕೊಡುಗೆ ಅಪಾರವಾದುದು. ಅವರ ಉತ್ಸಾಹ ಮೈದಾನದಲ್ಲಿ ಫೀಲ್ಡಿಂಗ್​ ಗುಣಮಟ್ಟವನ್ನು ಹೆಚ್ಚಿಸಿತ್ತು' ಎಂದು ದ್ರಾವಿಡ್​ ಹೇಳಿದ್ದಾರೆ.

13 ವರ್ಷಗಳ ವೃತ್ತಿಜೀವನದಲ್ಲಿ ಭಾರತ ಪರ 18 ಟೆಸ್ಟ್​, 226 ಏಕದಿನ ಮತ್ತು 78 ಟಿ20 ಪಂದ್ಯಗಳನ್ನು ಆಡಿರುವ ರೈನಾ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸರಿಸುಮಾರು 8 ಸಾವಿರ ರನ್​ ಕಲೆಹಾಕಿದ್ದಾರೆ. 'ಸುರೇಶ್​ ರೈನಾ ವೃತ್ತಿಜೀವನದಲ್ಲಿ ಎಲ್ಲ ಕಷ್ಟದ ಕೆಲಸಗಳನ್ನೂ ನಿರ್ವಹಿಸಿದ್ದಾರೆ. ವೃತ್ತಿಜೀವನದ ಹೆಚ್ಚಿನ ಸಮಯ ಅವರು ಕೆಳ ಮಧ್ಯಮ ಕ್ರಮಾಂಕದಲ್ಲೇ ಆಡಿದ್ದಾರೆ. ಕಠಿಣ ಸ್ಥಳದಲ್ಲೇ ಫೀಲ್ಡಿಂಗ್​ ನಿರ್ವಹಿಸಿದ್ದಾರೆ. ಕೆಲ ಉಪಯುಕ್ತ ಓವರ್​ಗಳನ್ನು ಎಸೆದಿದ್ದಾರೆ ಮತ್ತು ತಂಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಯಾವಾಗಲೂ ತಂಡಕ್ಕಾಗಿ ಆಡಿದ್ದಾರೆ' ಎಂದು ದ್ರಾವಿಡ್​ ಪ್ರಶಂಸಿಸಿದ್ದಾರೆ.

'ರೈನಾ ಟೆಸ್ಟ್​ ಕ್ರಿಕೆಟ್​ನ ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ್ದರೂ, ಆ ಯಶಸ್ಸನ್ನು ಮುಂದುವರಿಸಲಿಲ್ಲ. ಆದರೆ ಏಕದಿನ ಕ್ರಿಕೆಟ್​ನಲ್ಲಿ ಅವರ ಕೊಡುಗೆ ಅಪಾರವಾದುದು' ಎಂದು ದ್ರಾವಿಡ್​ ಹೇಳಿದ್ದಾರೆ. ಜೂನಿಯರ್​ ದಿನಗಳಿಂದಲೂ ರೈನಾ ಪ್ರತಿಭಾನ್ವಿತ ಆಟಗಾರರಾಗಿದ್ದರು ಎಂದು ನೆನಪಿಸಿಕೊಂಡಿರುವ ದ್ರಾವಿಡ್​, '19 ವಯೋಮಿತಿ ಕ್ರಿಕೆಟ್​ನಲ್ಲಿ ರೈನಾ ಅತ್ಯುತ್ತಮ ನಿರ್ವಹಣೆ ತೋರಿದ್ದರು. 2004-05ರ ಸಾಲಿನಲ್ಲಿ ಅವರು ಬೆಳಕಿಗೆ ಬಂದಿದ್ದರು. ಅವರು ಭಾರತೀಯ ಕ್ರಿಕೆಟ್​ನಲ್ಲಿ ಪ್ರಮುಖ ಆಟಗಾರರಾಗುವ ಲಕ್ಷಣವನ್ನು ಆಗಲೇ ತೋರಿದ್ದರು. ಕಳೆದ ಒಂದೂವರೆ ದಶಕದಲ್ಲಿ ಅವರು ಅದನ್ನು ನಿರೂಪಿಸಿ ತೋರಿಸಿದ್ದಾರೆ' ಎಂದಿದ್ದಾರೆ. ರೈನಾ ವೃತ್ತಿಜೀವನದಲ್ಲಿ 3 ಸರಣಿಗಳಲ್ಲಿ ಭಾರತ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net