ಇಂಗ್ಲೆಂಡ್ ಸರಣಿ ಜಯದ ಆಸೆಗೆ ಮಳೆ ಅಡಚಣೆ, 4ನೇ ದಿನದಾಟ ರದ್ದು

rain
Published on

ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿಯ ನಿರ್ಣಾಯಕ 3ನೇ ಪಂದ್ಯದ 4ನೇ ದಿನದಾಟ ಮಳೆ ಅಡಚಣೆಯಿಂದ ರದ್ದುಗೊಂಡಿದೆ. ಇದರಿಂದಾಗಿ, ಈ ಪಂದ್ಯವನ್ನು ಜಯಿಸಿ ಸರಣಿ ವಶಪಡಿಸಿಕೊಳ್ಳುವ ಹಂಬಲದಲ್ಲಿದ್ದ ಇಂಗ್ಲೆಂಡ್‌ಗೆ ನಿರಾಸೆ ಎದುರಾಗಿದೆ.

ಓಲ್ಡ್ ಟ್ರಾಫೋರ್ಡ್​ ಮೈದಾನದಲ್ಲಿ ಸೋಮವಾರ ಭಾರಿ ಮಳೆಯಿಂದಾಗಿ ಇಡೀ ದಿನ ಒಂದೂ ಎಸೆತ ಎಸೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ವೆಸ್ಟ್ ಇಂಡೀಸ್ ತಂಡದ ಕೊನೆಯ 8 ವಿಕೆಟ್‌ಗಳನ್ನು ಕಬಳಿಸಿ ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಪಂದ್ಯ ಮತ್ತು ಸರಣಿ ವಶಪಡಿಸಿಕೊಳ್ಳುವ ಆಂಗ್ಲರ ಹಂಬಲಕ್ಕೆ ತಡೆ ಎದುರಾಗಿದೆ. ಇದಲ್ಲದೆ 500 ವಿಕೆಟ್ ಸಾಧನೆಯಿಂದ ಕೇವಲ 1 ವಿಕೆಟ್ ದೂರದಲ್ಲಿರುವ ವೇಗಿ ಸ್ಟುವರ್ಟ್ ಬ್ರಾಡ್ ಕೂಡ ಈ ವಿಶೇಷ ಮೈಲಿಗಲ್ಲು ನೆಡಲು ಇನ್ನಷ್ಟು ಸಮಯ ಕಾಯಬೇಕಾಗಿದೆ.

ಗೆಲುವಿಗೆ 399 ರನ್ ಗುರಿ ಪಡೆದಿರುವ ವೆಸ್ಟ್ ಇಂಡೀಸ್ ತಂಡ ಮೂರನೇ ದಿನದಂತ್ಯಕ್ಕೆ 10 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಆರಂಭಿಕ ಕ್ರೇಗ್ ಬ್ರಾಥ್‌ವೇಟ್ 2 ಮತ್ತು ಶೈ ಹೋಪ್ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ವಿಂಡೀಸ್ ಗೆಲುವಿಗೆ ಇನ್ನೂ 389 ರನ್ ಅಗತ್ಯವಿದೆ. 3 ಪಂದ್ಯಗಳ ಸರಣಿ ಸದ್ಯ 1-1 ಸಮಬಲದಲ್ಲಿದೆ. ಇನ್ನು ಜೋ ರೂಟ್​ ಬಳಗ ಮಂಗಳವಾರದ ಅಂತಿಮ ದಿನದಾಟದಲ್ಲಿ ವೆಸ್ಟ್​ ಇಂಡೀಸ್​ ತಂಡವನ್ನು ಆಲೌಟ್​ ಮಾಡಿ ಪಂದ್ಯ ಮತ್ತು ಸರಣಿ ಜಯಿಸಲು ಹೋರಾಡಬೇಕಾಗಿದೆ.

ಇಂಗ್ಲೆಂಡ್: 369 ಮತ್ತು 58 ಓವರ್‌ಗಳಲ್ಲಿ 2 ವಿಕೆಟ್‌ಗೆ 226 ಡಿಕ್ಲೇರ್ (ಬರ್ನ್ಸ್ 90, ಸಿಬ್ಲೆ 56, ರೂಟ್ 68*, ಹೋಲ್ಡರ್ 24ಕ್ಕೆ 1), ವೆಸ್ಟ್ ಇಂಡೀಸ್: 65 ಓವರ್‌ಗಳಲ್ಲಿ 197 ಮತ್ತು 6 ಓವರ್‌ಗಳಲ್ಲಿ 2 ವಿಕೆಟ್‌ಗೆ 10 (ಹೋಪ್ 4*, ಬ್ರಾಡ್ 8ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net