ಎಲ್ಲಿಸ್ ಪೆರ‌್ರಿ ವಿಚ್ಛೇದನಕ್ಕೆ ಮುರಳಿ ವಿಜಯ್ ಕಾರಣವಂತೆ!

perry murali
Published on

ಬೆಂಗಳೂರು: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಎಲ್ಲಿಸ್ ಪೆರ‌್ರಿ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದ್ದು, ರಗ್ಬಿ ಆಟಗಾರ ಮ್ಯಾಟ್ ಟೂಮುವಾ ಜತೆಗಿನ 5 ವರ್ಷಗಳ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಎಲ್ಲಿಸ್ ಪೆರ‌್ರಿ ಅವರ ವಿಚ್ಛೇದನಕ್ಕೆ ಈಗ ಭಾರತದ ಕ್ರಿಕೆಟಿಗ ಮುರಳಿ ವಿಜಯ್ ಅವರನ್ನು ಕ್ರಿಕೆಟ್ ಪ್ರೇಮಿಗಳು ಟ್ರೋಲ್ ಮಾಡುತ್ತಿದ್ದಾರೆ. ಹಾಗಾದರೆ, ಎಲ್ಲಿಸ್ ಪೆರ‌್ರಿ ವಿಚ್ಛೇದನಕ್ಕಾಗಿ ಮುರಳಿ ವಿಜಯ್ ಅವರನ್ನು ದೂರಲು ಕಾರಣವೇನು ಗೊತ್ತೇ?

ಈ ಹಿಂದೆ ಲಾಕ್‌ಡೌನ್ ಸಮಯದಲ್ಲಿ ಮುರಳಿ ವಿಜಯ್ ಸಂದರ್ಶನವೊಂದರಲ್ಲಿ, ಎಲ್ಲಿಸ್ ಪೆರ‌್ರಿ ಅತ್ಯಂತ ಸುಂದರಿಯಾಗಿದ್ದಾರೆ. ಅವರ ಜತೆಗೆ ಡೇಟಿಂಗ್ ಹೋಗಲು ಬಯಸುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಎಲ್ಲಿಸ್ ಪೆರ‌್ರಿ ಕೂಡ ಮುರಳಿ ವಿಜಯ್ ಜತೆ ಡೇಟಿಂಗ್‌ಗೆ ಹೋಗಲು ಸಿದ್ಧಳಿದ್ದೇನೆ ಎಂದಿದ್ದರು. ಜತೆಗೆ ಡಿನ್ನರ್ ಡೇಟ್‌ನ ವೆಚ್ಚಗಳನ್ನು ಮುರಳಿ ವಿಜಯ್ ಅವರೇ ಭರಿಸಬೇಕೆಂದು ತಮಾಷೆ ಮಾಡಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಈಗ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮುರಳಿ ವಿಜಯ್ ಅವರ ಕಾಲೆಳೆಯುತ್ತಿದ್ದಾರೆ.

ಕೆಲವರು ಎಲ್ಲಿಸ್ ಪೆರ‌್ರಿ ವಿಚ್ಛೇದನ ಪಡೆದುಕೊಳ್ಳಲು ಮುರಳಿ ವಿಜಯ್ ಅವರೇ ಕಾರಣ ಎಂದು ತಮಾಷೆಯಾಗಿ ದೂರಿದ್ದರೆ, ಇನ್ನು ಕೆಲವರು ಎಲ್ಲಿಸ್ ಪೆರ‌್ರಿ ವಿಚ್ಛೇದನದಿಂದ ತಮಿಳುನಾಡಿನ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಸಂಭ್ರಮಿಸುತ್ತಿರುವ ರೀತಿಯ ಟ್ರೋಲ್‌ಗಳನ್ನು ಮಾಡಿದ್ದಾರೆ. ಮುರಳಿ ವಿಜಯ್​ ಜತೆಗೆ ಡೇಟಿಂಗ್​ಗೆ ಹೋಗಲು ಒಪ್ಪಿಕೊಂಡಿದ್ದೇ, ಪೆರ್ರಿ ದಾಂಪತ್ಯ ಜೀವನಕ್ಕೆ ಮುಳುವಾಯಿತು ಎಂದಿದ್ಧಾರೆ. ಮುರಳಿ ವಿಜಯ್ ಈ ಹಿಂದೆ ಸಹ-ಆಟಗಾರ ದಿನೇಶ್ ಕಾರ್ತಿಕ್ ವೈವಾಹಿಕ ಜೀವನದಲ್ಲೂ ಬಿರುಗಾಳಿ ಎಬ್ಬಿಸಿದ್ದರು. ಬಳಿಕ ದಿನೇಶ್ ಕಾರ್ತಿಕ್‌ರ ವಿಚ್ಛೇದಿತ ಪತ್ನಿಯನ್ನು ಮುರಳಿ ವಿಜಯ್ ಅವರೇ ಮದುವೆಯಾಗಿದ್ದರು. ಇದೀಗ ಈ ಚಾಳಿಯನ್ನು ಮುರಳಿ ವಿಜಯ್ ಮತ್ತೆ ಮುಂದುವರಿಸಿದ್ದಾರೆ ಎಂದೂ ಕೆಲವರು ತಮಾಷೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net