

ರಾಜ್ಕೋಟ್: ಕಳೆದ ವರ್ಷ ತವರಿನ ಏಕದಿನ ವಿಶ್ವಕಪ್ ಮುಕ್ತಾಯಗೊಂಡ ಬಳಿಕವೂ ಅವಧಿ ವಿಸ್ತರಣೆಯೊಂದಿಗೆ ಟೀಮ್ ಇಂಡಿಯಾ ಕೋಚ್ ಆಗಿ ಮುಂದುವರಿದಿರುವ ರಾಹುಲ್ ದ್ರಾವಿಡ್, ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ವರೆಗೂ ಹುದ್ದೆಯಲ್ಲಿ ಇರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಖಚಿತಪಡಿಸಿದ್ದಾರೆ.
ಏಕದಿನ ವಿಶ್ವಕಪ್ ಬಳಿಕ ದ್ರಾವಿಡ್ ಮತ್ತು ತಂಡದ ಇತರ ತರಬೇತಿ ಸಿಬ್ಬಂದಿ ಹುದ್ದೆಯಲ್ಲಿ ಮುಂದುವರಿದರೂ ಅವರ ಹೊಸ ಅವಧಿ ಎಷ್ಟು ಸಮಯದವರೆಗೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿರಲಿಲ್ಲ. ಇದೀಗ ಟಿ20 ವಿಶ್ವಕಪ್ವರೆಗೆ ದ್ರಾವಿಡ್ ಅವಧಿ ದೃಢಪಟ್ಟಿದೆ.
"ಏಕದಿನ ವಿಶ್ವಕಪ್ ಬೆನ್ನಲ್ಲೇ ರಾಹುಲ್ ಭಾಯ್ (ದ್ರಾವಿಡ್) ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದರು. ಇದರ ನಡುವೆ ನಮಗಿಬ್ಬರಿಗೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇಂದು ಕೊನೆಗೂ ಪರಸ್ಪರ ಚರ್ಚಿಸಿದೆವು' ಎಂದು ಜಯ್ ಷಾ ಬುಧವಾರ ರಾತ್ರಿ ನಡೆದ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸಮಾರಂಭದ ವೇಳೆ ಹೇಳಿದರು.
ಜಯ್ ಷಾ ಇದೇ ವೇಳೆ, ಟಿ20 ವಿಶ್ವಕಪ್ನಲ್ಲೂ ರೋಹಿತ್ ಶರ್ಮ ಭಾರತ ತಂಡವನ್ನು ಮುನ್ನಡೆಸುವುದನ್ನು ಖಚಿತಪಡಿಸಿದ್ದಾರೆ. ಜತೆಗೆ ರೋಹಿತ್ ಸಾರಥ್ಯದಲ್ಲಿ ಭಾರತ ಟಿ20 ವಿಶ್ವಕಪ್ ಗೆಲ್ಲುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ನಿರ್ಧಾರಕ್ಕೆ ಬೆಂಬಲ
ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ನಿರ್ಧಾರವನ್ನೂ ಜಯ್ ಷಾ ಬೆಂಬಲಿಸಿದ್ದಾರೆ. "15 ವರ್ಷಗಳ ಕಾಲ ಆಡಿದ ಆಟಗಾರನೊಬ್ಬ ಮೊದಲ ಬಾರಿಗೆ ವೈಯಕ್ತಿಕ ಕಾರಣಕ್ಕೆ ರಜೆ ಕೇಳುವ ಹಕ್ಕು ಇರುತ್ತದೆ. ಕೊಹ್ಲಿ ಸಕಾರಣವಿಲ್ಲದೆ ವಿರಾಮ ತೆಗೆದುಕೊಳ್ಳುವವರಲ್ಲ. ನಮ್ಮ ಆಟಗಾರರನ್ನು ನಂಬುವುದು ಅಗತ್ಯ' ಎಂದು ಹೇಳಿದ್ದಾರೆ. ಜತೆಗೆ ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಹೊಸ ಪಾತ್ರವೊಂದನ್ನು ನೀಡುವ ಬಗ್ಗೆ ಶ್ರೀದಲ್ಲೇ ಚರ್ಚಿಸಲಾಗುವುದು ಎಂದಿದ್ದಾರೆ.
ಕೇಂದ್ರಿಯ ಗುತ್ತಿಗೆ ಆಟಗಾರರಿಗೆ ದೇಶೀಯ ಕ್ರಿಕೆಟ್ ಆಟ ಕಡ್ಡಾಯ
ಬಿಸಿಸಿಐನಿಂದ ಕೇಂದ್ರಿಯ ಗುತ್ತಿಗೆ ಪಡೆದುಕೊಂಡಿರುವ ಆಟಗಾರರು ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯಿಂದ ಶಾರ್ಟ್ಲಿಸ್ಟ್ ಆಗಿರುವ ಯುವ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ, ಅದರಲ್ಲೂ ಪ್ರಮುಖವಾಗಿ ರೆಡ್ಬಾಲ್ ಟೂರ್ನಿಗಳಲ್ಲಿ ಆಡುವುದು ಕಡ್ಡಾಯವಾಗಿದೆ ಎಂದೂ ಜಯ್ ಷಾ ತಿಳಿಸಿದ್ದಾರೆ. ಜತೆಗೆ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ಗೆ ಮುಕ್ತ ಸ್ವಾತಂತ್ರ$್ಯ ನೀಡಿರುವುದಾಗಿ ಹೇಳಿದ್ದಾರೆ. ಈ ಮೂಲಕ ದೇಶೀಯ ಕ್ರಿಕೆಟ್ ಆಡದೆ ಐಪಿಎಲ್ ಸಿದ್ಧತೆಯಲ್ಲಿ ತೊಡಗಿಕೊಂಡಿರುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. "ಆಯ್ಕೆ ಸಮಿತಿ ಅಧ್ಯಕ್ಷ, ಭಾರತ ತಂಡದ ಕೋಚ್ ಅಥವಾ ನಾಯಕ ಸೂಚಿಸಿದರೆ ರೆಡ್ ಬಾಲ್ ಕ್ರಿಕೆಟ್ನಲ್ಲಿ ಆಡಲೇಬೇಕು. ಫಿಟ್ನೆಸ್ ಬಗ್ಗೆ ಎನ್ಸಿಎಯಿಂದಲೂ ಹಸಿರು ನಿಶಾನೆ ಇದ್ದರೆ ಆಗ ಆಡದಿರುವುದಕ್ಕೆ ಯಾವುದೇ ನೆಪ ನೀಡಿದರೂ ಪರಿಗಣಿಸುವುದಿಲ್ಲ' ಎಂದು ಜಯ್ ಷಾ ವಿವರಿಸಿದ್ದಾರೆ.