

ಬೆಂಗಳೂರು: ಭಾರತ ಟೆಸ್ಟ್ ತಂಡದ ಉಪನಾಯಕ ಹಾಗೂ ಪ್ರಮುಖ ವೇಗಿಯಾಗಿರುವ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಬಳಿಕ ದೊರೆತ ಅಮೂಲ್ಯ ಬಿಡುವಿನ ಸಮಯವನ್ನು ಪತ್ನಿ ಸಂಜನಾ ಗಣೇಶನ್ ಜತೆಗೆ ಕಳೆದಿದ್ದಾರೆ. ಇದೇ ವೇಳೆ ಗಂಡ&ಹೆಂಡತಿ ಜತೆಯಾಗಿ ಮಾಡಿರುವ ಪ್ರಾಯೋಜಕತ್ವದ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬ ಸಂಜನಾರ ಬಾಡಿ ಶೇಮಿಂಗ್ ಮಾಡಲು ಯತ್ನಿಸಿದ್ದಾನೆ. ಇದಕ್ಕೆ ಸಂಜನಾ ಸರಿಯಾಗಿಯೇ ಉತ್ತರ ನೀಡಿದ್ದು, ಅವರ ದಿಟ್ಟ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಜನಾ ಹಾಕಿರುವ ಪೋಸ್ಟ್ಗೆ ಅಭಿಮಾನಿಯೊಬ್ಬ, "ಭಾಬಿ ಮೋಟಿ (ದಪ್ಪ) ಕಾಣಿಸುತ್ತಿದ್ದಾರೆ' ಎಂದು ಪ್ರತಿಕ್ರಿಯಿಸಿದ್ದ. ಇದಕ್ಕೆ ದಿಟ್ಟ ತಿರುಗೇಟು ನೀಡಿರುವ ಸಂಜನಾ, "ಶಾಲೆಯ ವಿಜ್ಞಾನ ಪುಸ್ತಕವನ್ನು ನಿನಗೆ ನೆನಪಿಟ್ಟುಕೊಳ್ಳಲು ಆಗುವುದಿಲ್ಲ. ಮಹಿಳೆಯರ ದೇಹದ ಬಗ್ಗೆ ಕಾಮೆಂಟ್ಗಳನ್ನು ಹಾಕಲು ಇಲ್ಲಿಗೆ ಬಂದುಬಿಟ್ಟ. ಇಲ್ಲಿಂದ ಓಡಿಹೋಗು' ಎಂದು ಬರೆದಿದ್ದಾರೆ. ಸಂಜನಾರ ಈ ಉತ್ತರ ವೈರಲ್ ಆಗಿದ್ದು, ಬಾಡಿ ಶೇಮಿಂಗ್ ವಿರುದ್ಧ ಮಾತನಾಡಿದ್ದಕ್ಕೆ ಮತ್ತು ದೇಹವನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕ್ರೀಡಾ ನಿರೂಪಕಿಯಾಗಿರುವ ಸಂಜನಾ ಗಣೇಶನ್, 2021ರಲ್ಲಿ ಗೋವಾದಲ್ಲಿ ಬುಮ್ರಾರನ್ನು ವಿವಾಹವಾಗಿದ್ದರು. ದಂಪತಿಗೆ 2023ರ ಸೆಪ್ಟೆಂಬರ್ನಲ್ಲಿ ಗಂಡು ಮಗು ಜನಿಸಿತ್ತು.