

ಬೆಂಗಳೂರು: ಟೆಸ್ಟ್ ಕ್ರಿಕೆಟ್ ಇತಿಹಾಸ ಕಂಡ ಕಲಾತ್ಮಕ ಬ್ಯಾಟ್ಸ್ಮನ್ಗಳಲ್ಲಿ ರಾಹುಲ್ ದ್ರಾವಿಡ್ ಪ್ರಮುಖರು. ಕರ್ನಾಟಕದ ಈ ಬ್ಯಾಟ್ಸ್ಮನ್ಗೆ 'ದಿ ವಾಲ್' ಅಥವಾ 'ಗೋಡೆ' ಎಂಬ ಅಡ್ಡ ಹೆಸರು ಇದೆ. ಅವರು ಈ ಹೆಸರಿಗೆ ಎಷ್ಟು ಸೂಕ್ತವಾದವರು ಎಂದು ಐಸಿಸಿಯ ಒಂದು ಟ್ವೀಟ್ ಸಮರ್ಥ ಉತ್ತರವನ್ನು ನೀಡಿದೆ. ಹಾಗಾದರೆ ಆ ಟ್ವೀಟ್ನಲ್ಲೇನಿದೆ ಗೊತ್ತೇ ?
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದ್ರಾವಿಡ್ ಎದುರಿಸಿರುವಷ್ಟು ಎಸೆತಗಳನ್ನು ಬೇರೆ ಯಾವ ಬ್ಯಾಟ್ಸ್ಮನ್ ಕೂಡ ಎದುರಿಸಿಲ್ಲ. ದ್ರಾವಿಡ್ ಆಡಿರುವುದು 164 ಟೆಸ್ಟ್ ಪಂದ್ಯ. ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ದಕ್ಷಿಣ ಆಫ್ರಿಕಾದ ಜಾಕ್ಸ್ ಕಾಲಿಸ್ ಅವರಿಬ್ಬರು ದ್ರಾವಿಡ್ಗಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ ಕಡಿಮೆ ಎಸೆತಗಳನ್ನು ಎದುರಿಸಿದ್ದಾರೆ. ದ್ರಾವಿಡ್ 31,258 ಎದುರಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಗೋಡೆಯಂತೆ ನಿಂತಿದ್ದಾರೆ. 200 ಟೆಸ್ಟ್ ಆಡಿರುವ ಸಚಿನ್ ಎದುರಿಸಿರುವುದು 29,437 ಎಸೆತ. 166 ಟೆಸ್ಟ್ ಆಡಿರುವ ಕಾಲಿಸ್ ಎದುರಿಸಿರುವುದು 28,903 ಎಸೆತ. ದ್ರಾವಿಡ್ ಹೊರತಾಗಿ ಬೇರೆ ಯಾರೂ ಟೆಸ್ಟ್ ಕ್ರಿಕೆಟ್ನಲ್ಲಿ 30 ಸಾವಿರಕ್ಕಿಂತ ಹೆಚ್ಚು ಎಸೆತ ಎದುರಿಸಿಲ್ಲ ಎಂದು ಐಸಿಸಿ ಟ್ವೀಟಿಸಿದೆ.
ದ್ರಾವಿಡ್ ವೃತ್ತಿಜೀವನದಲ್ಲಿ ಪ್ರತಿ ಇನಿಂಗ್ಸ್ಗೆ 190.6 ಎಸೆತಗಳನ್ನು ಎದುರಿಸಿದ್ದಾರೆ. ಈ ಮೂಲಕ ದ್ರಾವಿಡ್ ಪ್ರತಿ ಇನಿಂಗ್ಸ್ನಲ್ಲೂ ಗೋಡೆಯಂತೆ ಟೀಮ್ ಇಂಡಿಯಾಗೆ ರಕ್ಷಣೆ ಒದಗಿಸಿದ್ದಾರೆ ಎಂಬುದು ಅಂಕಿ -ಅಂಶಗಳಿಂದಲೂ ಸಾಬೀತು ಆದಂತಾಗಿದೆ. ಪ್ರತಿ ಇನ್ನಿಂಗ್ಸ್ನಲ್ಲೂ ದ್ರಾವಿಡ್ ವಿಕೆಟ್ ಪಡೆದುಕೊಳ್ಳುವುದು ಬೌಲರ್ಗಳಿಗೆ ಎಷ್ಟು ಸವಾಲಾಗುತಿತ್ತು ಎಂಬುದು ಕೂಡ ಸ್ಪಷ್ಟವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 27 ಸಾವಿರಕ್ಕಿಂತ ಅಧಿಕ ಎಸೆತ ಎದುರಿಸಿರುವ ಮತ್ತಿಬ್ಬರೆಂದರೆ ವೆಸ್ಟ್ ಇಂಡೀಸ್ನ ಶಿವನಾರಾಯಣ್ ಚಂದ್ರಪಾಲ್ (27,395 ಎಸೆತ, 164 ಟೆಸ್ಟ್ ) ಮತ್ತು ಆಸ್ಟ್ರೇಲಿಯಾದ ಅಲನ್ ಬಾರ್ಡರ್ (27,002 ಎಸೆತ, 156 ಟೆಸ್ಟ್).
ಗೋಡೆ ಆಗಿದ್ದು ಹೇಗೆ ದ್ರಾವಿಡ್
ಇನ್ನು ದ್ರಾವಿಡ್ಗೆ ಗೋಡೆ ಎಂಬ ಹೆಸರು ಬಂದ ಬಗೆ ಬಹಳ ಸರಳವಾಗಿದೆ. ನಿವೃತ್ತಿ ಸಮಯದಲ್ಲಿ ಸ್ವತ ದ್ರಾವಿಡ್ ಹೇಳಿದ ಪ್ರಕಾರ, ಪತ್ರಿಕೆಯೊಂದು ಸುಂದರ ಹೆಡಿಂಗ್ ನೀಡುವ ಸಲುವಾಗಿ 'ವಾಲ್' ಎಂದು ಅವರನ್ನು ಕರೆದಿತ್ತಂತೆ. ಬಳಿಕ ಅದುವೇ ಅವರಿಗೆ ಅಂಟಿಕೊಂಡಿತು. ಹೀಗಾಗಿ ಪತ್ರಿಕೆಯಿಂದಲೇ ದ್ರಾವಿಡ್ಗೆ ಗೋಡೆ ಎಂಬ ಹೆಸರು ದೊರೆತಿದ್ದು ಸ್ಪಷ್ಟವಾಗಿದೆ. ಇನ್ನು ದ್ರಾವಿಡ್ ಅವರ ಗೋಡೆ ಎಂಬ ಹೆಸರನ್ನು ಸಾಕ್ಷಾತ್ಕಾರಗೊಳಿಸಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಗೋಡೆಯೊಂದನ್ನು ನಿರ್ಮಿಸಲಾಗಿದೆ. ದ್ರಾವಿಡ್ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ಸಮಯದಲ್ಲಿ ಇದನ್ನು 10 ಸಾವಿರ ಇಟ್ಟಿಗೆಗಳಿಂದ ನಿರ್ಮಿಸಲಾಗಿತ್ತು. ಇದನ್ನು ದ್ರಾವಿಡ್ ಅವರ ತಾಯಿ ಪುಷ್ಪಾ ಅವರೇ ವಿನ್ಯಾಸಗೊಳಿಸಿದ್ದರು ಎಂಬುದು ವಿಶೇಷ. ಇದರ ಮೇಲೆ ದ್ರಾವಿಡ್ ಅವರ ಟ್ರೇಡ್ಮಾರ್ಕ್ ಕವರ್ ಡ್ರೈವ್ ಶಾಟ್ನ ಚಿತ್ರವಿದೆ. ಜತೆಗೆ 'ಬದ್ಧತೆ, ಸ್ಥಿರತೆ, ಗುಣಮಟ್ಟ' ಎಂದು ಬರೆಯಲಾಗಿದೆ.