

ಬೆಂಗಳೂರು: ಭಾರತದಲ್ಲಿ ಎರಡು ಗೋಡೆಗಳು ಜನಪ್ರಿಯ. ಒಂದು ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರ 'ದೀವಾರ್'. ಇನ್ನೊಂದು ಟೀಮ್ ಇಂಡಿಯಾದ 'ವಾಲ್' ಅರ್ಥಾತ್ ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್. ಇದೀಗ ಇವೆರಡೂ ಗೋಡೆಗಳು ಒಂದಾಗಿವೆ. ಅಂದರೆ ಅಮಿತಾಭ್ ಬಚ್ಚನ್ 'ದೀವಾರ್' ಕಾಣಿಸಿಕೊಂಡಿರುವ ಜನಪ್ರಿಯ ಸ್ಟೈಲ್ನಲ್ಲಿ ಈಗ ರಾಹುಲ್ ದ್ರಾವಿಡ್ ಕೂಡ ಕಾಣಿಸಿಕೊಂಡು ಗಮನಸೆಳೆದಿದ್ದಾರೆ.
ಡ್ರೈ-ಫ್ರುಟ್ಸ್ ಮತ್ತು ನಟ್ಸ್ ಕಂಪನಿ 'ಫಾಮ್ರ್ಲಿ'ಯ ಜಾಹೀರಾತಿನಲ್ಲಿ ದ್ರಾವಿಡ್, ಬಚ್ಚನ್ ಸ್ಟೈಲ್ ಅನುಕರಣೆ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾಹೀರಾತಿನ ಲುಕ್ ಮಾತ್ರವಲ್ಲದೆ ಧ್ವನಿಯಲ್ಲೂ ಬಚ್ಚನ್ ಅವರನ್ನು ಅನುಕರಣೆ ಮಾಡಲು ದ್ರಾವಿಡ್ ಯತ್ನಿಸಿರುವುದು ವಿಶೇಷವೆನಿಸಿದೆ.
ಈ ಮುನ್ನ ದ್ರಾವಿಡ್ ಕ್ರೆಡ್ ಕಂಪನಿಯ ಜಾಹೀರಾತಿನಲ್ಲಿ 'ಇಂದಿರಾನಗರದ ಗೂಂಡಾ' ಸ್ಟೈಲ್ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಎಂದಿನ ಶಾಂತ ಸ್ವಭಾವಕ್ಕೆ ಬದಲಾಗಿ ಅವರು ಆವಾಜ್ ಹಾಕಿ ಗೂಂಡಾಗಿರಿ ಪ್ರದರ್ಶಿಸುವ ಮೂಲಕ ಗಮನಸೆಳೆದಿದ್ದರು.