

ಮ್ಯಾಡ್ರಿಡ್: ಸ್ಪೇನ್‌ನ ದಿಗ್ಗಜ ಟೆನಿಸ್ ಆಟಗಾರ ರಾಫೆಲ್ ನಡಾಲ್(Rafael Nadal) ನಿವೃತ್ತಿ ಘೋಷಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ವರ್ಷದ ನವೆಂಬರ್‌ನಲ್ಲಿ ಮಲಗಾದಲ್ಲಿ ನಡೆಯುವ ಡೇವಿಸ್ ಕಪ್ ಫೈನಲ್ ನಡಾಲ್ ಅವರ ಕೊನೆಯ ಪಂದ್ಯಾವಳಿಯು ಆಗಿರುತ್ತದೆ.
ಈ ವರ್ಷದ ಆರಂಭದಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅವರು ಯಾವುದೇ ಪಂದ್ಯವನ್ನು ಆಡಿಲ್ಲ. ನವೆಂಬರ್ 19 ರಿಂದ 21 ರವರೆಗೆ ನಡೆಯಲಿರುವ ಡೇವಿಸ್ ಕಪ್ ಫೈನಲ್‌ನಲ್ಲಿ ಸ್ಪೇನ್ ಕ್ವಾರ್ಟರ್ ಫೈನಲ್‌ನಲ್ಲಿ ನೆದರ್ಲೆಂಡ್ ವಿರುದ್ಧ ಆಡಲಿದ್ದಾರೆ.
ನಾನು ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ಎರಡು ವರ್ಷಗಳು ತುಂಬಾ ಕಷ್ಟಕರವಾಗಿದೆ. ಯಾವುದೇ ಮಿತಿಯಿಲ್ಲದೆ ಆಡಲು ಸಾಧ್ಯವಾಯಿತು ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.
ನಿವೃತ್ತಿ ಘೋಷಿಸಿರುವ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಜೀವನದಲ್ಲಿ ಪ್ರತಿಯೊಂದಕ್ಕೂ ಪ್ರಾರಂಭ ಮತ್ತು ಅಂತ್ಯವಿದೆ. ತಾನು ಊಹಿಸಿರುವುದಕ್ಕಿಂತ ದೀರ್ಘವಾದ ಮತ್ತು ಹೆಚ್ಚು ಯಶಸ್ವಿಯಾದ ವೃತ್ತಿಜೀವನವನ್ನು ಕೊನೆಗೊಳಿಸಲು ಇದು ಸರಿಯಾದ ಸಮಯ ಎಂದು ಭಾವಿಸುತ್ತಾನೆ. ಕೊನೆಯ ಪಂದ್ಯಾವಳಿ ಡೇವಿಸ್ ಕಪ್ ಫೈನಲ್ ಆಗಿದ್ದು ಅದರಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಉತ್ಸುಕನಾಗಿರುವುದಾಗಿ ನಡಾಲ್ ತಿಳಿಸಿದ್ದಾರೆ.
38 ವರ್ಷದ ರಾಫೆಲ್ ನಡಾಲ್ ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ನೊವಾಕ್ ಜೊಕೊವಿಕ್ ನಂತರ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ಎರಡನೇ ಟೆನಿಸ್ ತಾರೆ ಇವರು. ಜೊಕೊವಿಕ್ 24 ಪ್ರಶಸ್ತಿಗಳನ್ನು ಹೊಂದಿದ್ದರೆ ನಡಾಲ್ 22 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಅವರು ಫ್ರೆಂಚ್ ಓಪನ್ ರೂಪದಲ್ಲಿ 14 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದಲ್ಲದೆ 4 ಬಾರಿ ಯುಎಸ್ ಓಪನ್ ಪ್ರಶಸ್ತಿ ಮತ್ತು ವಿಂಬಲ್ಡನ್ ಮತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ತಲಾ 2 ಬಾರಿ ಗೆದ್ದಿದ್ದಾರೆ. ಇದಲ್ಲದೆ 2008ರ ಒಲಿಂಪಿಕ್ಸ್‌ನಲ್ಲಿ ಟೆನಿಸ್‌ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ನಡಾಲ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ನಡಾಲ್ ಆಟ ಕೇವಲ ಗೆಲುವಿಗಷ್ಟೇ ಸೀಮಿತವಾಗಿಲ್ಲ. ಅವರು ತಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ಯುವ ಆಟಗಾರರಿಗೆ ಸ್ಫೂರ್ತಿ ನೀಡಿದ್ದಾರೆ. ಅವರ ಆಟವು ಸ್ಪೇನ್ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಟೆನಿಸ್ ಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.(ಏಜೆನ್ಸೀಸ್)