

ಮುಂಬೈ: ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ, ಸಾಕ್ಷಿ ಸಿಂಗ್ ರಾವತ್ರನ್ನು ಮದುವೆ ಆಗಿ 11 ವರ್ಷಗಳ ಕಳೆದಿವೆ. ಇಬ್ಬರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಜೀವಾ ಹೆಸರಿನ ಹೆಣ್ಣು ಮಗಳಿರುವುದು ಎಲ್ಲರಿಗೂ ತಿಳಿದೇ ಇದೆ.
ಆದರೆ, ಧೋನಿ ಅವರು ಸಾಕ್ಷಿ ಅವರನ್ನು ಮದುವೆ ಆಗುವುದಕ್ಕೂ ಮುನ್ನ ಬೆಳಗಾವಿ ಬ್ಯೂಟಿ ಲಕ್ಷ್ಮೀ ರೈ ಜತೆ ಡೇಟಿಂಗ್ ನಡೆಸುತ್ತಿದ್ದರು. 2008 ರಿಂದ 2009ರವರೆಗೆ ಇಬ್ಬರು ಅಲ್ಲಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇಬ್ಬರ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ. ಇದೀಗ ಲಕ್ಷ್ಮೀ ರೈ ಅವರು ಧೋನಿ ಜತೆಗಿನ ಬ್ರೇಕಪ್ಗೆ ಕಾರಣ ಏನೆಂಬುದನ್ನು ಮಾಧ್ಯಮ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಧೋನಿಯೊಂದಿಗಿನ ನನ್ನ ಸಂಬಂಧವು ಬಹಳ ಕಾಲ ಉಳಿಯುವ ಕಲೆ ಅಥವಾ ಗಾಯದ ಗುರುತೆಂದು ನಾನು ಭಾವಿಸಿದ್ದೇನೆ. ನಮ್ಮಿಬ್ಬರ ಸಂಬಂಧದ ಬಗ್ಗೆ ಚರ್ಚಿಸಲು ಜನರಿಗೆ ಇನ್ನೂ ಶಕ್ತಿ ಮತ್ತು ತಾಳ್ಮೆ ಇದೆ ಎಂದು ತಿಳಿದಾಗ ನನಗೆ ನಿಜಕ್ಕೂ ಆಘಾತವಾಗುತ್ತದೆ. ಟಿವಿ ಮಾಧ್ಯಮಗಳಿಗೆ ಹೋದಾಗಲೆಲ್ಲ ನನ್ನ ಮತ್ತು ಧೋನಿ ಸಂಬಂಧದ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಆದರೆ, ಒಂದು ದಿನ ನನ್ನ ಮಕ್ಕಳು ಟಿವಿಯಲ್ಲಿ ಅದನ್ನು ನೋಡಿ ನನ್ನನ್ನು ಪ್ರಶ್ನಿಸುತ್ತಾರೆಂಬ ಆಲೋಚನೆಗೆ ನಾನು ಈಗಲೂ ಹೆದರುತ್ತೇನೆಂದು ಲಕ್ಷ್ಮೀ ರೈ ಹೇಳಿಕೊಂಡಿದ್ದಾರೆ.
ಧೋನಿಗೂ ಮುನ್ನ ನಾನು ಮೂರ್ನಾಲ್ಕು ಸಂಬಂಧಗಳನ್ನು ಹೊಂದಿದ್ದೆ. ಆದರೆ, ಯಾರೂ ಕೂಡ ಅದನ್ನು ಗಮನಿಸಿರಲಿಲ್ಲ ಎಂದರು. ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದಲೇ ಬೇರೆಯಾದೆವು. ನನಗೆ ಧೋನಿ ಬಗ್ಗೆ ಚೆನ್ನಾಗಿ ತಿಳಿದಿತ್ತು. ಆದರೆ, ಅದನ್ನೇ ಸಂಬಂಧ ಎಂದು ಹೇಳುವಷ್ಟು ನನಗೆ ಖಚಿತತೆ ಇರಲಿಲ್ಲ. ಏಕೆಂದರೆ ಅದು ನಮ್ಮಿಬ್ಬರ ನಡುವೆ ವರ್ಕೌಟ್ ಆಗಲಿಲ್ಲ. ಈಗಲೂ ಸಹ ನಾವಿಬ್ಬರು ಪರಸ್ಪರ ಗೌರವವನ್ನು ಹೊಂದಿದ್ದೇವೆ. ಅವರು ತುಂಬಾ ಬೆಳವಣಿಗೆ ಹೊಂದಿದ್ದು, ಮದುವೆ ಆಗಿ ಸಂತೋಷವಾಗಿದ್ದಾರೆಂದು ಲಕ್ಷ್ಮೀ ರೈ ಹೇಳಿದ್ದಾರೆ. (ಏಜೆನ್ಸೀಸ್)