ಆರನ್ ಫಿಂಚ್​ಗೆ ಮಾತಿನಲ್ಲೇ ಪಂಚ್​ ಕೊಟ್ಟ ಪ್ರಸಿದ್ಧ ಕೃಷ್ಣ! ವಿಡಿಯೋ ವೈರಲ್​

Prashidha Krishan
Published on

ನವದೆಹಲಿ: ಸೋಮವಾರ (ಏ.18) ನಡೆದ ಪಂದ್ಯದಲ್ಲಿ ಸ್ಪಿನ್ನರ್​ ಪ್ರಸಿದ್ಧ ಕೃಷ್ಣ, ಆರನ್ ಫಿಂಚ್ ವಿಕೆಟ್​ ಕಬಳಿಸಿದ್ದು, ಕೊಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ವಿರುದ್ಧ ರಾಜಸ್ಥಾನ ರಾಯಲ್ಸ್​ (ಆರ್​ಆರ್) ಗೆಲುವಿನಲ್ಲಿ ಪ್ರಮುಖ ತಿರುವು ನೀಡಿತು.

ಕೃಷ್ಣ ಮಾಡಿದ ಶಾರ್ಟ್​ ಮತ್ತು ವೈಡ್​ ಎಸೆತವನ್ನು ಫಿಂಚ್ ಹೊಡೆಯಲು ಹೋದಾಗ ಚೆಂಡು ಬ್ಯಾಟ್​ಗೆ ತಾಗಿ ಗಾಳಿಯಲ್ಲಿ ಹಾರಿ ನೇರವಾಗಿ ಕರುಣ್​ ನಾಯರ್​ ಕೈ ಸೇರಿತು. ಈ ವೇಳೆ 58 ರನ್​ ಗಳಿಸಿ ಅಬ್ಬರಿಸುತ್ತಿದ್ದ ಫಿಂಚ್ ಔಟಾಗಿ​ ಸಪ್ಪೆ ಮೋರೆ ಹಾಕಿಕೊಂಡು ಡಗೌಟ್​ ಕಡೆ ಹೋಗುವಾಗ ಪ್ರಸಿದ್ಧ ಕೃಷ್ಣ ಕಡೆ ತಿರುಗಿ​ ಕೆಣಕುವಂತಹ ಮಾತನ್ನು ಆಡಿದ್ದಾರೆ. ಇದಕ್ಕೆ ಪ್ರತ್ಯುತ್ತವಾಗಿ ಪ್ರಸಿದ್ಧ ಕೃಷ್ಣ ಕೂಡ ಫಿಂಚ್​ಗೆ ಮಾತಿನ ಪಂಚ್​ ನೀಡಿದ್ದಾರೆ. ಕೇವಲ ಮಾತಿನಲ್ಲೇ ಇಬ್ಬರ ವಾಗ್ವಾದ ಮುಕ್ತಾಯವಾಗಿದ್ದು ಖುಷಿಯಾದ ಸಂಗತಿಯಾಗಿದೆ.

ಇಬ್ಬರ ನಡುವಿನ ವಾಗ್ವಾದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಪರ-ವಿರೋಧ ಕಾಮೆಂಟ್​ಗಳು ಬರಿದುಬರುತ್ತಿದೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 5 ವಿಕೆಟ್‌ಗೆ 217 ರನ್ ಕಲೆಹಾಕಿತು. ಹಾಲಿ ಆವೃತ್ತಿಯಲ್ಲಿ ದಾಖಲಾದ ಈ ಗರಿಷ್ಠ ಮೊತ್ತವನ್ನು ದಿಟ್ಟವಾಗಿಯೇ ಬೆನ್ನಟ್ಟುವ ಸಾಹಸಕ್ಕೆ ಕೆಕೆಆರ್ ಕೈಹಾಕಿದರೂ ಅಂತಿಮವಾಗಿ 19.4 ಓವರ್‌ಗಳಲ್ಲಿ 210 ರನ್‌ಗಳಿಗೆ ಸರ್ವಪತನ ಕಂಡಿತು.

ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ (103 ರನ್, 61 ಎಸೆತ, 9 ಬೌಂಡರಿ, 5 ಸಿಕ್ಸರ್) ಶತಕದಾಟ ಹಾಗೂ ಸ್ಪಿನ್ನರ್ ಯಜುವೇಂದ್ರ ಚಾಹಲ್ (40ಕ್ಕೆ 5) ಹ್ಯಾಟ್ರಿಕ್ ಸಾಧನೆ ನೆರವಿನಿಂದ ರಾಜಸ್ಥಾನ ರಾಯಲ್ಸ್ ಐಪಿಎಲ್-15ರ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು 7 ರನ್‌ಗಳಿಂದ ಮಣಿಸಿತು.

ನಾಯಕ ಶ್ರೇಯಸ್ ಅಯ್ಯರ್ (85ರನ್, 51 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಆರನ್ ಫಿಂಚ್ (58ರನ್, 28 ಎಸೆತ, 9 ಬೌಂಡರಿ, 2 ಸಿಕ್ಸರ್) ಅಬ್ಬರದ ಬಳಿಕ ಕೆಕೆಆರ್ ದಿಢೀರ್ ಕುಸಿಯಿತು. ಕೊನೆಯಲ್ಲಿ ಬಾಲಂಗೋಚಿ ಉಮೇಶ್ ಯಾದವ್ (21 ರನ್, 8 ಎಸೆತ, 1 ಬೌಂಡರಿ, 2 ಸಿಕ್ಸರ್) ಕೆಲಕಾಲ ಸ್ಫೋಟಿಸಿದರೂ ಕೆಕೆಆರ್ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಇದರಿಂದ ಶ್ರೇಯಸ್ ಅಯ್ಯರ್ ಪಡೆ ಹ್ಯಾಟ್ರಿಕ್ ಸೋಲಿನ ನಿರಾಸೆ ಕಂಡಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net