

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಲ್ರೌಂಡರ್ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ ತಂಡದಲ್ಲಿ ತಮ್ಮ ಪಾತ್ರವನ್ನು ಬಹಿರಂಗಪಡಿಸಿದ್ದು, ಆರ್ಸಿಬಿಯನ್ನು ಮನಸೋ ಇಚ್ಛೆ ಕೊಂಡಾಡಿದ್ದಾರೆ.
ಕಳೆದ ಐಪಿಎಲ್ ಸೀಸನ್ನಲ್ಲಿ ಪಂಜಾಬ್ ಪರ ಆಡಿದ ಮ್ಯಾಕ್ಸ್‌ವೆಲ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಬೇಕಾಯಿತು. ನಂತರ ಆರ್‌ಸಿಬಿ ಹರಾಜಿನಲ್ಲಿ ಮ್ಯಾಕ್ಸ್ವೆಲ್ರನ್ನು ದಾಖಲೆಯ ಮೊತ್ತಕ್ಕೆ ಖರೀದಿಸಿದಾಗ ಎಲ್ಲರೂ ಹುಬ್ಬೇರಿಸಿದ್ದರು. ಆದರೆ, ಪ್ರಸಕ್ತ ಐಪಿಎಲ್ನಲ್ಲಿ ಮ್ಯಾಕ್ಸಿ ಎದುರಿಸಿರುವ ಎರಡೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ನ್ಯಾಯ ಒದಗಿಸುತ್ತಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಸಂಕಷ್ಟದ ಸಮಯದಲ್ಲಿ ಉತ್ತಮ ಆಟವಾಡಿದ ಮ್ಯಾಕ್ಸಿ 41 ಎಸೆಗಳಲ್ಲಿ 59 ರನ್ ಕಲೆಹಾಕಿದರು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ಎದುರು ಆರ್‌ಸಿಬಿ 6 ರನ್ಗಳ ಕಡಿಮೆ ಅಂತರದಿಂದ ಗೆಲುವು ದಾಖಲಿಸಲು ಸಾಧ್ಯವಾಯಿತು.
ತಮ್ಮ ಯಶಸ್ಸಿನ ಬಗ್ಗೆ ಇದೇ ವೇಳೆ ಮಾತನಾಡಿರುವ ಮ್ಯಾಕ್ಸಿ, ಪ್ರಸ್ತುತ ತಂಡದಲ್ಲಿ ತಾನು ನಿರ್ವಹಿಸಬೇಕಾದ ಪಾತ್ರದ ಬಗ್ಗೆ ತಂಡದ ನಾಯಕ, ತರಬೇತುದಾರ ಮತ್ತು ಮ್ಯಾನೇಜ್ಮೆಂಟ್ ಕೇಳಿರುವುದು ನನಗೆ ಪರಿಪೂರ್ಣವಾಗಿ ಹೊಂದಿಕೊಂಡಿದೆ ಎಂದು ಮ್ಯಾಕ್ಸಿ ಹೇಳಿದ್ದಾರೆ.
ಆರ್ಸಿಬಿಯಲ್ಲಿ ಉತ್ತಮ ಆರಂಭ ಸಿಕ್ಕಿದೆ. ಅವರು ನನಗೆ ನಿರ್ಧಿಷ್ಟ ಪಾತ್ರವನ್ನು ನೀಡಿದ್ದಾರೆ. ಹೊಂದಿಕೊಳ್ಳಲು ಸಮಯ ನೀಡುವುದರ ಜತೆಗೆ ಆಟವನ್ನು ನನ್ನಿಷ್ಟದಂತೆ ಮುಕ್ತವಾಗಿ ಆಡಲು ಬಿಟ್ಟಿದ್ದಾರೆ. ನಮ್ಮ ಆಸಿಸ್ ತಂಡದಲ್ಲೂ ನನ್ನ ಪಾತ್ರ ಇದೇ ಆಗಿದೆ ಎಂದು ತಿಳಿಸಿದ್ದಾರೆ.
ನನ್ನನ್ನು ಕಾರ್ಯದಲ್ಲಿರಿಸುವುದರಲ್ಲಿ ಕೊಹ್ಲಿ ಉತ್ತಮ. ಪರಿಸ್ಥಿತಿಗೆ ಹೊಂದಿಕೊಳ್ಳಲು ಅವಕಾಶ ನೀಡುತ್ತಿದ್ದಾರೆ. ತಂಡದಲ್ಲಿ ನನ್ನ ಜತೆಯಾಗಿರುವವರು ಸಹ ನನಗೆ ತುಂಬಾ ಹೊಂದಿಕೊಳ್ಳುತ್ತಾರೆ. ಇದು ನನ್ನ ನಾಲ್ಕನೇ ಐಪಿಎಲ್ ತಂಡವಾಗಿದ್ದು, ನನ್ನ ಪ್ರಭಾವ ಬೀರಲು ನನ್ನ ಮೇಲೆ ಒತ್ತಡವಿದೆ ಎಂದು ಮ್ಯಾಕ್ಸಿ ಹೇಳಿಕೊಂಡಿದ್ದಾರೆ.
ಪಂದ್ಯದ ವಿಚಾರಕ್ಕೆ ಬಂದರೆ, ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ (59 ರನ್, 41 ಎಸೆತ, 5 ಬೌಂಡರಿ, 3 ಸಿಕ್ಸರ್) ದಿಟ್ಟ ಹೋರಾಟದ ಬಲದಿಂದ 8 ವಿಕೆಟ್‌ಗೆ 149 ರನ್ ಪೇರಿಸಿತು. ಪ್ರತಿಯಾಗಿ ಸನ್‌ರೈಸರ್ಸ್ ತಂಡ ನಾಯಕ ಡೇವಿಡ್ ವಾರ್ನರ್ (54 ರನ್, 37 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಕನ್ನಡಿಗ ಮನೀಷ್ ಪಾಂಡೆ (38 ರನ್, 39 ಎಸೆತ, 2 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ ಜಯದತ್ತ ಮುನ್ನಡೆದರೂ, ಅಂತಿಮವಾಗಿ 9 ವಿಕೆಟ್‌ಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. (ಏಜೆನ್ಸೀಸ್)