

ನವದೆಹಲಿ: ಏ. 24ರಂದು ನಡೆದ ಲಖನೌ ಸೂಪರ್ಜೈಂಟ್ಸ್ (ಎಲ್ಎಸ್ಜಿ) ಹಾಗೂ ಮುಂಬೈ ಇಂಡಿಯನ್ಸ್ (ಎಂಐ) ನಡುವಿನ ಐಪಿಎಲ್ ಪಂದ್ಯದಲ್ಲಿ ಎಲ್ಎಸ್ಜಿ ಆಟಗಾರ ಕೃನಾಲ್ ಪಾಂಡ್ಯ ನಡೆದುಕೊಂಡ ರೀತಿಗೆ ಹಿರಿಯ ಆಟಗಾರರು ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.
ಎಂಐ ಆಟಗಾರ ಕೀರನ್ ಪೊಲಾರ್ಡ್ ವಿಕೆಟ್ ಕಬಳಿಸಿದ ಕೃನಾಲ್ ಅದನ್ನು ಸಂಭ್ರಮಿಸುವಾಗ ಅತಿರೇಕಕ್ಕೆ ಒಳಗಾಗಿ ಕ್ರೀಡಾಸ್ಫೂರ್ತಿಯನ್ನು ಮರೆತಿದ್ದಾರೆ. ಔಟ್ ಆದ ಬಳಿಕ ಡಗ್ಔಟ್ ಕಡೆ ತೆರಳುತ್ತಿದ್ದ ಪೊಲಾರ್ಡ್ ಬಳಿ ಹೋದ ಕೃನಾಲ್, ತಲೆಗೆ ಮುತ್ತಿಟ್ಟು ಪೊಲಾರ್ಡ್ ಅವರನ್ನು ಅಣುಕಿಸುವ ಮೂಲಕ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ಇಂತಹ ವಿಚಾರಗಳಲ್ಲಿ ತಕ್ಷಣ ಪ್ರತಿಕ್ರಿಯೆ ನೀಡುವ ಪೊಲಾರ್ಡ್ ಮೊನ್ನೆಯ ಪಂದ್ಯದಲ್ಲಿ ಕೃನಾಲ್ ಅತಿರೇಕ ಕಂಡು ಸುಮ್ಮನಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.
ಆದರೆ, ಕೃನಾಲ್ ವರ್ತನೆಗೆ ಹಿರಿಯ ಆಟಗಾರರು ಅಸಮಾಧಾನವನ್ನು ಹೊರಹಾಕಿದ್ದಾರೆ. ಪೊಲಾರ್ಡ್ ಕೂಡ ಇದು ಇಷ್ಟ ಇಲ್ಲ ಎಂದು ನನಗೆ ತಿಳಿದಿದೆ. ಅವರಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರೂ ಮೈದಾನದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ. ಸದ್ಯ ಪೊಲಾರ್ಡ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿದ್ದದ್ದು ಕೃನಾಲ್ ಅದೃಷ್ಟ ಎಂದು ಮಾಜಿ ಕ್ರಿಕೆಟಿಗ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಮಾಜಿ ಆಟಗಾರ ಆರ್.ಪಿ. ಸಿಂಗ್ ಕೂಡ ಈ ಕುರಿತು ಮಾತನಾಡಿದ್ದು, ಈ ರೀತಿ ತಾಳ್ಮೆ ಕಳೆದುಕೊಳ್ಳುವುದನ್ನು ಯಾರೊಬ್ಬರು ಇಷ್ಟಪಡುವುದಿಲ್ಲ. ಔಟ್ ಆದ ಪೊಲಾರ್ಡ್ ಒಳಗೆ ಯಾವ ಭಾವನೆ ಇದೆ ಎಂಬುದು ನಿನಗೆ ತಿಳಿದಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ರೀತಿ ಮಾಡುವುದು ಸರಿಯಲ್ಲ. ಒಂದು ವೇಳೆ ಪೊಲಾರ್ಡ್ ಸ್ಥಳದಲ್ಲೇ ಪ್ರತಿಕ್ರಿಯೆ ನೀಡಿದ್ದರೆ ಏನಾಗ್ತಿತ್ತು? ಮೊದಲೇ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗದೆ ನಿರಾಶೆಯಿಂದ ಹಿಂದೆ ಸರಿಯುತ್ತಿದ್ದರು. ಇಂತಹ ವೇಳೆ ಪ್ರತಿಕ್ರಿಯಿಸಿದ್ದರೆ ಅಲ್ಲಿ ಬೇರೇನೆ ನಡೆಯುತ್ತಿತ್ತು ಎಂದು ಆರ್.ಪಿ. ಸಿಂಗ್ ಟೀಕಿಸಿದ್ದಾರೆ.
ಪಾರ್ಥೀವ್ ಪಟೇಲ್ ಮಾತನಾಡಿ, ಕೃನಾಲ್ ಮತ್ತು ಪೊಲಾರ್ಡ್ ಒಳ್ಳೆಯ ಸ್ನೇಹಿತರು ಎಂದು ತಿಳಿದಿದೆ. ಆದರೆ, ಮೈದಾನದಲ್ಲಿ ಪರಿಸ್ಥಿತಿ ಸ್ವಲ್ಪ ಬೇರೆಯಾಗಿರುತ್ತದೆ. ಅಲ್ಲಿನ ಭಾವನೆಗಳು ಕೂಡ ವಿಭಿನ್ನವಾಗಿರುತ್ತದೆ. ಪೊಲಾರ್ಡ್ ಹೆಚ್ಚು ರನ್ ಮಾಡಿಲ್ಲ. ಅಲ್ಲದೆ, ಮುಂಬೈ ಕೂಡ ಸಾಲು ಸಾಲು ಪಂದ್ಯಗಳನ್ನು ಕೈಚೆಲ್ಲಿದೆ. ಇಂತಹ ಸಂದರ್ಭದಲ್ಲಿ ಆ ತಂಡದ ಆಟಗಾರರಿಗೆ ಸಮಯ ಕೊಡಬೇಕಾಗಿರುವುದು ಅವಶ್ಯಕ. ಬೇಕಾದರೆ, ಡ್ರೆಸ್ಸಿಂಗ್ ಕೋಣೆಯಲ್ಲಿ ಇಡೀ ವರ್ಷ ನಿಮಗೆ ಬೇಕಾದಷ್ಟು ತಮಾಷೆ ಮಾಡಬಹುದು. ಆದರೆ, ಈ ಪ್ರತಿಕ್ರಿಯೆಯು ಸ್ವಲ್ಪ ಅತಿರೇಕ ಎಂದು ನಾನು ಭಾವಿಸುತ್ತೇನೆಂದು ಪಾರ್ಥೀವ್ ಪಟೇಲ್ ಅವರು ಕೃನಾಲ್ ನಡೆಯನ್ನು ಖಂಡಿಸಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ರಾಹುಲ್ ಏಕಾಂಗಿ ನಿರ್ವಹಣೆ ಫಲವಾಗಿ 6 ವಿಕೆಟ್ಗೆ 168 ರನ್ ಕಲೆಹಾಕಿತು. ಮುಂಬೈ ವಿರುದ್ಧದ ಹಿಂದಿನ ಮುಖಾಮುಖಿಯಲ್ಲೂ ರಾಹುಲ್ ಅಜೇಯ 103 ರನ್ ಬಾರಿಸಿದ್ದರು. ಪ್ರತಿಯಾಗಿ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ಗೆ 132 ರನ್ ದಾಖಲಿಸಲಷ್ಟೇ ಶಕ್ತವಾಯಿತು. ಈ ಮೂಲಕ ಎಲ್ಎಸ್ಜಿ ಟೂರ್ನಿಯ ಎರಡೂ ಮುಖಾಮುಖಿಯಲ್ಲಿ ಮುಂಬೈ ತಂಡವನ್ನು ಮಣಿಸಿದಂತಾಯಿತು. (ಏಜೆನ್ಸೀಸ್)