

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಖ್ಯಾಬೆ ಲಾಮೆ ಇದೇ ಮೊದಲ ಬಾರಿಗೆ ಭಾರತದ ಬ್ರ್ಯಾಂಡ್ ಒಂದರ ಜತೆ ಕೈ ಜೋಡಿಸಿದ್ದಾರೆ.
ಒಂದೇ ಒಂದು ಮಾತನಾಡದೇ ಕೇವಲ ತನ್ನ ಕೈ ಸನ್ನೆಯಿಂದಲೇ ತ್ವರಿತವಾಗಿ ಮತ್ತು ಸುಲಭವಾಗಿ ಕೆಲಸಗಳನ್ನು ಹೇಗೆ ಮಾಡಬೇಕೆಂದು ತೋರಿಸುವುದರಲ್ಲಿ ಖ್ಯಾಬೆ ಲಾಮೆ ಅವರು ವಿಶ್ವಪ್ರಸಿದ್ಧರಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 47 ಮಿಲಿಯನ್ ಫಾಲೋವರ್ಸ್ ಹೊಂದಿರುವ ಖ್ಯಾಬೆ ಲಾಮೆ, ಟ್ವಿಟರ್ನಲ್ಲಿಯು 1 ಲಕ್ಷ ಹಿಂಬಾಲಕರನ್ನು ಸಂಪಾದಿಸಿದ್ದಾರೆ.
ಟಿಕ್ಟಾಕ್ನಲ್ಲಂತೂ ಧೂಳೆಬ್ಬಿಸಿರುವ ಖ್ಯಾಬೆ ಲಾಮೆ ಬರೋಬ್ಬರಿ 100 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ವಿಶೇಷವೆಂದರೆ, ಅವರು ಯಾವೊಂದು ವಿಡಿಯೋದಲ್ಲೂ ಮ್ಯೂಸಿಕ್ ಬಿಟ್ಟರೆ, ಅವರ ಧ್ವನಿ ಇರುವುದಿಲ್ಲ. ಕೈ ಸನ್ನೆ ಮೂಲಕವೇ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಖ್ಯಾಬೆ ಲಾಮೆ ಅವರ ಆದಾಯ 2 ಮಿಲಿಯನ್ ಡಾಲರ್ ಎಂದು ತಿಳಿದುಬಂದಿದೆ.
ಪ್ರಸ್ತುತ ಖ್ಯಾಬೆ ಲಾಮೆ ಅವರು ಭಾರತದ ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್ಫಾರ್ಮ್ ಡ್ರೀಮ್ 11 ಆ್ಯಪ್ ಜತೆ ಕೈ ಜೋಡಿಸಿದ್ದಾರೆ. ಭಾರತೀಯ ಬ್ರ್ಯಾಂಡ್ನೊಂದಿಗೆ ಖ್ಯಾಬೆ ಲಾಮೆ ಅವರ ಮೊದಲ ಸಹಭಾಗಿತ್ವ ಇದಾಗಿದೆ. ಅಂದಾಜಿನ ಪ್ರಕಾರ, 21 ವರ್ಷದ ಟಿಕ್‌ಟಾಕ್ ಸ್ಟಾರ್ ಒಂದು ಪ್ರಚಾರದ ವೀಡಿಯೊಗೆ 50,000 ಡಾಲರ್ ವಿಧಿಸುತ್ತಾರೆಂದು ತಿಳಿದುಬಂದಿದೆ. ಅಲ್ಲದೆ, ಪ್ರತಿ ತಿಂಗಳು ಅಂದಾಜು 200,000 ಡಾಲರ್ ಗಳಿಸುತ್ತಾರೆಂದು ತಿಳಿದುಬಂದಿದೆ.
ಸೆನೆಗಲ್ ಮೂಲದ ಖ್ಯಾಬೆ ಲಾಮೆ ಪ್ರಸ್ತುತ ಇಟಲಿಯಲ್ಲಿ ವಾಸವಿದ್ದು, ಇತ್ತೀಚೆಗಷ್ಟೇ ಟಿಕ್ಟಾಕ್ನಲ್ಲಿ ಲಾಮೆ 100 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ದಾಖಲೆ ಬರೆದಿದ್ದಾರೆ. (ಏಜೆನ್ಸೀಸ್)