

ಇಸ್ಲಮಾಬಾದ್: ಆಸ್ಟ್ರೇಲಿಯಾ ವಿರುದ್ಧ ಸೋತು ಟಿ20 ವಿಶ್ವಕಪ್ನಿಂದ ಪಾಕಿಸ್ತಾನ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪಾಕ್ ತಂಡದ ಮಾಜಿ ಆಲ್ರೌಂಡರ್ ಆಟಗಾರ ಶಾಹೀದ್ ಅಫ್ರಿದಿ, ತಮ್ಮ ಭಾವಿ ಅಳಿಯ ಹಾಗೂ ಪಾಕ್ ವೇಗಿ ಶಾಹೀನ್ ಅಫ್ರಿದಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಆಸಿಸ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಾಕ್ ಗೆಲುವಿನ ಹೊಸ್ತಿಲಲ್ಲಿ ಪಂದ್ಯವನ್ನು ಕೈಚೆಲ್ಲಿತು. 19ನೇ ಓವರ್ನಲ್ಲಿ ಶಾಹೀನ್ ಮೂರು ಸಿಕ್ಸರ್ ಹೊಡೆಸಿಕೊಂಡರು. ಈ ಬಗ್ಗೆ ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡಿರುವ ಶಾಹೀದ್ ಅಫ್ರಿದಿ ಮಹತ್ವದ ಘಟ್ಟದಲ್ಲಿ ಬೌಲಿಂಗ್ ಮಾಡುವಾಗ ಸೂಕ್ಷ್ಮತೆ ಅರಿತು ಬೌಲಿಂಗ್ ಮಾಡಬೇಕು ಎಂದು ಹೇಳಿದ್ದಾರೆ. ಹಸನ್ ಅಲಿ ಕ್ಯಾಚ್ ಬಿಟ್ಟ ಬಳಿಕ ಶಾಹೀನ್ ಎಚ್ಚರಿಕೆಯಿಂದ ಬೌಲಿಂಗ್ ಮಾಡಬೇಕಿತ್ತು ಎಂದಿದ್ದಾರೆ.
ಹಸನ್ ಅಲಿ ಕ್ಯಾಚ್ ಬಿಟ್ಟ ಮಾತ್ರಕ್ಕೆ ಅಷ್ಟು ಕೆಟ್ಟದಾಗಿ ಶಾಹೀನ್ ಬೌಲಿಂಗ್ ಮಾಡಬಾರದಿತ್ತು. ಮ್ಯಾಥೀವ್ ವೇಡ್ಗೆ ನೇರವಾಗಿ ಬೌಲ್ ಮಾಡುವ ಬದಲಾಗಿ ಔಟ್ಸೈಡ್ ಸ್ಟಂಪ್ಗೆ ಯಾರ್ಕರ್ ಎಸೆಯಬೇಕಾಗಿತ್ತು. ಬೌಲ್ ಮಾಡುವ ಮುನ್ನ ಸ್ವಲ್ಪ ಯೋಚಿಸಬೇಕಿತ್ತು ಎಂದು ಹೇಳಿದರು.
ಶಾಹೀನ್ ಅದ್ಭುತ ಆಟಗಾರ ಎಂಬುದರಲ್ಲಿ ಸಂಶಯವಿಲ್ಲ. ವಾಸಿಂ ಅಕ್ರಮ್ ಅಥವಾ ಮೊಹಮ್ಮದ್ ಅಮೀರ್ ಹೊಸ ಚೆಂಡಿನೊಂದಿಗೆ ಈ ರೀತಿ ಬೌಲ್ ಮಾಡುವುದನ್ನು ಮಾತ್ರ ನೋಡಿದ್ದೇನೆ. ಶಾಹೀನ್, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕ್ರಿಕೆಟ್ ಅನುಭವದಿಂದ ಕಲಿಯುತ್ತಾರೆ ಮತ್ತು ಭವಿಷ್ಯಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆಂದು ಅಫ್ರಿದಿ ತಿಳಿಸಿದರು.
ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ಪಾಕಿಸ್ತಾನ ತಂಡದ ಪಾಲಿಗೆ ಮಹತ್ವದ ಆಟಗಾರನಾಗಲಿದ್ದಾರೆಂದು ಅಫ್ರಿದಿ ಭಾವಿ ಅಳಿಯನನ್ನು ಕೊನೆಯಲ್ಲಿ ಕೊಂಡಾಡಿದರು.
ಅಂದಹಾಗೆ ಶಾಹೀದ್ ಅಫ್ರಿದಿ ಮಗಳು ಅನ್ಸಾ ಅಫ್ರಿದಿಯನ್ನು ಶಾಹೀನ್ ಅಫ್ರಿದಿ ವರಿಸಲಿದ್ದಾರೆ. (ಏಜೆನ್ಸೀಸ್)