

ನವದೆಹಲಿ: 22ನೇ ಆವೃತ್ತಿಯ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಂಗ್ ಸಕಲ ರೀತಿಯಲ್ಲೂ ಸಜ್ಜಾಗಿದೆ. ಜುಲೈ 28 ರಿಂದ ಆಗಸ್ಟ್ 8 ರವರೆಗೆ ಕ್ರೀಡಾಕೂಟ ನಡೆಯುತ್ತಿದ್ದು, 20 ವರ್ಷಗಳ ಬಳಿಕ ಇಂಗ್ಲೆಂಡ್‍ನಲ್ಲಿ ಪ್ರತಿಷ್ಠಿತ ಕ್ರೀಡಾಕೂಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ (ಜುಲೈ 20) ಪ್ರಧಾನಿ ಮೋದಿ ಅವರು ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಜೊತೆ ವರ್ಚುವಲ್ ಸಂವಾದ ನಡೆಸಿ, ಸ್ಫೂರ್ತಿ ತುಂಬುವ ಮೂಲಕ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದರು.
ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒತ್ತಡವನ್ನು ಬಿಟ್ಟು ನಿಮ್ಮ ಬಲದೊಂದಿಗೆ ಉತ್ತಮವಾಗಿ ಆಡಿ. ಕೊಯ್ ನಹಿ ಹೈ ಟಕ್ಕರ್ ಮೈ, ಕ್ಯೂನ್ ಪಡೆ ಹೂ ಚಕ್ಕರ್ ಮೈ ಎಂಬ ಪದವನ್ನು ನೀವು ಕೇಳುರುತ್ತೀರಿ, ಅದೇ ಉತ್ಸಾಹದಲ್ಲೇ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಆಡಿ ಎಂದು ಪ್ರಧಾನಿ ಮೋದಿ ಹೇಳಿದರು.
ಜುಲೈ 28ರಂದು ಬರ್ಮಿಂಗ್ಹ್ಯಾಮ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ ಆರಂಭವಾದಾಗ ಅದೇ ದಿನ ತಮಿಳುನಾಡಿನಲ್ಲಿ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ ಶುರುವಾಗಲಿದೆ. ಹೀಗಾಗಿ ತಮ್ಮ ಸಾಮರ್ಥ್ಯವನ್ನು ವಿಶ್ವದ ಎದುರು ಸಾಬೀತು ಮಾಡಲು ಮುಂಬರುವ ದಿನಗಳು ಭಾರತೀಯ ಆಟಗಾರರಿಗೆ ಮಹತ್ವವವಾಗಿದೆ ಎಂದು ಹೇಳಿದರು.
ಭಾರತೀಯ ಒಲಿಂಪಿಕ್ ಅಸೊಸಿಯೇಷನ್ (ಐಒಎ) ಕಾಮನ್ವೆಲ್ತ್ ಗೇಮ್ಸ್ಗೆ ತನ್ನ 322 ಸದಸ್ಯರನ್ನು ಹೆಸರಿಸಿದೆ. ಇದರಲ್ಲಿ 215 ಕ್ರೀಡಾಪಟುಗಳು ಮತ್ತು 107 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡಿದೆ. ಜುಲೈ 28 ರಿಂದ ಆಗಸ್ಟ್ 8ರವರೆಗೆ ಬ್ರಿಟಿಷ್ ನಗರದಲ್ಲಿ ಈ ಗೇಮ್ ನಡೆಯಲಿದೆ.
2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆದ ಕೂಟದಲ್ಲಿ ಭಾರತ 26 ಸ್ವರ್ಣ, ತಲಾ 20 ಬೆಳ್ಳಿ, ಕಂಚು ಒಳಗೊಂಡಂತೆ 66 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 3ನೇ ಸ್ಥಾನಪಡೆದಿತ್ತು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಪದಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಪಡೆದಿದ್ದವು.
ಪ್ರಧಾನಿ ನಡೆಸಿದ ಸಂವಾದದ ವೇಳೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕಾಮನ್‌ವೆಲ್ತ್ ಕ್ರೀಡಾಕೂಟದ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಪಾಲ್ಗೊಂಡಿದ್ದರು. (ಏಜೆನ್ಸೀಸ್)