

ಹೋಬರ್ಟ್ (ಆಸ್ಟ್ರೇಲಿಯಾ): ಇಲ್ಲಿನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ಬುಧವಾರ (ಅ.19) ನಡೆದ ಟಿ20 ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ ತಂಡ ಎದುರಾಳಿ ಸ್ಕಾಟ್ಲೆಂಡ್ ತಂಡದ ವಿರುದ್ಧ 6 ವಿಕೆಟ್ಗಳ ಅಮೋಘ ಜಯ ದಾಖಲಿಸುವ ಮೂಲಕ ಸೂಪರ್ 12 ಹಂತ ಪ್ರವೇಶಿಸುವ ಭರವಸೆಯನ್ನು ಉಳಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ ಮೈಕೆಲ್ ಜೋನ್ಸ್ (86) ಮತ್ತು ನಾಯಕ ಬೆರಿಂಗ್ಟನ್ (37) ಹಾಗೂ ಎಂ. ಕ್ರಾಸ್ (28) ಅವರ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಐರ್ಲೆಂಡ್ ಪರ ಬೌಲ್ ಮಾಡಿದ ಕರ್ಟಿಸ್ ಕ್ಯಾಂಫರ್ ಎರಡು ವಿಕೆಟ್ ಪಡೆದು ಮಿಂಚಿದರೆ, ಜೋಶುವಾ ಲಿಟಲ್ ಮತ್ತು ಮಾರ್ಕ್ ಅಡೇರ್ ತಲಾ ಒಂದೊಂದು ವಿಕೆಟ್ ಪಡೆದರು.
ಸ್ಕಾಟ್ಲೆಂಡ್ ನೀಡಿದ 177 ರನ್ಗಳ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡ ಕರ್ಟಿಸ್ ಕ್ಯಾಂಫರ್ (32 ಎಸೆತಗಳಲ್ಲಿ ಅಜೇಯ 72 ರನ್) ಹಾಗೂ ಜಾರ್ಜ್ ಡಾಕ್ರೆಲ್ (ಅಜೇಯ 39) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 19 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕುವ ಮೂಲಕ ಸ್ಕಾಟ್ಲೆಂಡ್ ಎದುರು 6 ವಿಕೆಟ್ಗಳ ಜಯ ದಾಖಲಿಸಿತು.
9.3 ಓವರ್ಗಳಲ್ಲಿ 61 ರನ್ಗೆ 4 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ಐರ್ಲೆಂಡ್ ತಂಡಕ್ಕೆ ಕರ್ಟಿಸ್ ಕ್ಯಾಂಫರ್ ಮತ್ತು ಜಾರ್ಜ್ ಡಾಕ್ರೆಲ್ ಆಸರೆಯಾದರು. ಅಜೇಯರಾಗಿ ಅಬ್ಬರದ ಆಟವಾಡಿದ ಉಭಯ ಆಟಗಾರರು ತಂಡವನ್ನು ಗೆಲುವಿನ ದಡ ಸೇರಿಸಿದರು. ಸ್ಕಾಟ್ಲೆಂಡ್ ಪರ ಬೌಲಿಂಗ್ ಮಾಡಿದ ಮಾರ್ಕ್ ವ್ಯಾಟ್, ಬ್ರಾಡ್ ವ್ಹೀಲ್, ಸಫ್ಯಾನ್ ಷರೀಫ್ ಹಾಗೂ ಮೈಕೆಲ್ ಲೀಸ್ಕ್ ತಲಾ ಒಂದೊಂದು ವಿಕೆಟ್ ಪಡೆದರು.
ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ಇಂಡೀಸ್ ತಂಡವನ್ನೇ ಮಣಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದ ಸ್ಕಾಟ್ಲೆಂಡ್ ತಂಡ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೋಲುಂಡಿದೆ. (ಏಜೆನ್ಸೀಸ್)