ಇತ್ತ ರೋಹಿತ್​ ಶರ್ಮ ವಿಕೆಟ್​ ಕಬಳಿಸಿದ ಅಶ್ವಿನ್, ಅತ್ತ ರೋಹಿತ್ ಪತ್ನಿಯನ್ನು ಸಂತೈಸಿದ ಅಶ್ವಿನ್​ ಪತ್ನಿ!

Ashwin
Published on

ಮುಂಬೈ: ಸತತ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್​ ತಂಡ ನಿನ್ನೆ (ಏ.30) ರಾಜಸ್ಥಾನ ರಾಯಲ್ಸ್​ ವಿರುದ್ಧ ಗೆಲುವು ದಾಖಲಿಸುವ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಈವರೆಗೂ 9 ಪಂದ್ಯ ಆಡಿರುವ ಮುಂಬೈ ತಂಡಕ್ಕೆ ನಿನ್ನೆ ರಾಜಸ್ಥಾನ ವಿರುದ್ಧ ಸಾಧಿಸಿದ ಗೆಲುವು ಈ ಟೂರ್ನಿಯ ಮೊದಲನೇ ಗೆಲುವಾಗಿದೆ.

ಮುಂಬೈಗೆ ಮೊದಲ ಗೆಲುವು ಒಂದು ಕಡೆಯಾದರೆ, ನಿನ್ನೆ ನಡೆದ ಪಂದ್ಯ ಭಾವನಾತ್ಮಕ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯಿತು. ಮುಂಬೈ ಗೆದ್ದರೂ ನಾಯಕ ರೋಹಿತ್​ ಶರ್ಮ ಒಳ್ಳೆಯ ರನ್​ ಗಳಿಸಲು ಸಾಧ್ಯವಾಗಲಿಲ್ಲ. ಕೇವಲ ಎರಡು ರನ್​ಗೆ ಔಟಾದರು. ರವಿಚಂದ್ರನ್​ ಅಶ್ವಿನ್​ ಎಸೆದ ಮೂರನೇ ಓವರ್​ನ 3ನೇ ಎಸತದಲ್ಲಿ ರೋಹಿತ್​ ಔಟ್​ ಆಗಿ ನಿರ್ಗಮಿಸಿದರು.

ಈ ಟೂರ್ನಿಯಲ್ಲಿ ರೋಹಿತ್​ ರನ್​ ಕಲೆ ಹಾಕಲು ಹರಸಾಹಸ ಪಡುತ್ತಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲೂ ಫಾರ್ಮ್​ಗೆ ಮರಳಲು ರೋಹಿತ್​ಗೆ ಸಾಧ್ಯವಾಗಲಿಲ್ಲ. ಕೇವಲ 2 ರನ್​ಗೆ ಔಟಾದ ಬೇಜಾರಿನಲ್ಲಿ ರೋಹಿತ್​ ಡಗೌಟ್​ ಕಡೆ ಹೆಜ್ಜೆ ಹಾಕುವಾಗ ಪೆವಲಿಯನ್​ನಲ್ಲಿ ಕುಳಿತಿದ್ದ ಅವರ ಪತ್ನಿ ರಿತಿಕಾ ಸಾಜ್ದೇಹ್ ನೋವಿನಿಂದ ತುಂಬಾ ಭಾವುಕರಾದರು. ಪಕ್ಕದಲ್ಲೇ ಇದ್ದ ಅಶ್ವಿನ್​ ಪತ್ನಿ ಪ್ರೀತಿ ಅದನ್ನು ಗಮನಿಸಿ, ರಿತಿಕಾ ಬಳಿಕ ಹೋಗಿ ತಬ್ಬಿಕೊಂಡು ಸಂತೈಸಿದರು.

ಒಂದು ಕಡೆ ಅಶ್ವಿನ್​ ಎಸೆತದಲ್ಲಿ ರೋಹಿತ್​ ಔಟಾದರೆ, ದುಃಖದಲ್ಲಿದ್ದ ರೋಹಿತ್​ ಪತ್ನಿ ರಿತಿಕಾರನ್ನು ಅಶ್ವಿನ್​ ಪತ್ನಿ ಪ್ರೀತಿ ಸಂತೈಸಿದ ಕ್ಷಣ ತುಂಬಾ ಭಾವುಕವಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಸತತ 8 ಸೋಲುಗಳಿಂದ ಪರಿತಪಿಸುತ್ತಿದ್ದ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಡೆಗೂ ಜಯದ ನಗೆ ಬೀರಲು ಯಶಸ್ವಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ ಮುಂಬೈ ತಂಡ ಐಪಿಎಲ್-15ರ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲನುಭವಿಸಿತು. ಇದರೊಂದಿಗೆ ನಾಯಕ ರೋಹಿತ್ ಶರ್ಮ ತಂಡದ ಗೆಲುವಿನೊಂದಿಗೆ ಬರ್ತ್ ಡೇ ಸಂಭ್ರಮವನ್ನು ಹೆಚ್ಚಿಸಿಕೊಂಡರು.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ, ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ (67ರನ್, 52 ಎಸೆತ, 5 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ನೆರವಿನಿಂದ ರಾಜಸ್ಥಾನ 6 ವಿಕೆಟ್‌ಗೆ 158 ರನ್ ಪೇರಿಸಿತು. ಬಳಿಕ ಆರಂಭಿಕ ವೈಲ್ಯದ ನಡುವೆಯೂ ಸೂರ್ಯಕುಮಾರ್ ಯಾದವ್ (51ರನ್, 39 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದಾಟದ ನೆರವಿನಿಂದ ಮುಂಬೈ 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 161 ರನ್‌ಗಳಿಸಿ ಜಯದ ನಗೆ ಬೀರಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net