ಟಿ20 ವಿಶ್ವಕಪ್-2022​ ವೇಳಾಪಟ್ಟಿ ಪ್ರಕಟ: ಈ ಬಾರಿಯೂ ಮೊದಲ ಪಂದ್ಯದಲ್ಲೇ ಭಾರತಕ್ಕೆ ಪಾಕ್​ ಎದುರಾಳಿ​

T20 Worldcup
Published on

ನವದೆಹಲಿ: ಚುಟುಕು ಕ್ರಿಕೆಟ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. 2022ನೇ ಸಾಲಿನ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಪ್ರಕಟಿಸಿದೆ.

ಅಕ್ಟೋಬರ್​ 16 ರಿಂದ ಆರಂಭವಾಗಲಿರುವ ವಿಶ್ವಕಪ್​ ನವೆಂಬರ್​ 16ಕ್ಕೆ ಅಂತ್ಯವಾಗಲಿದೆ. ಈ ಬಾರಿ ಟಿ20 ವಿಶ್ವಕಪ್​ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿದೆ.

ಕಳೆದ ಬಾರಿಯ ವಿಶ್ವಕಪ್​ನಂತೆಯೇ ಈ ಬಾರಿಯು ಟೀಮ್​ ಇಂಡಿಯಾ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಎದುರಿಸಲಿದೆ. ಅಕ್ಟೋಬರ್​​ 23ರಂದು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕ್ರಿಕೆಟ್​ ಕದನಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಮೆಲ್ಬೋರ್ನ್​ ಸ್ಟೇಡಿಂಯಲ್ಲಿ ಪಂದ್ಯ ನಡೆಯಲಿದೆ.

ಒಟ್ಟು 16 ತಂಡಗಳು ಭಾಗವಹಿಸಲಿದ್ದು, 45 ಪಂದ್ಯಗಳು ನಡೆಯಲಿವೆ. ಇತಿಹಾಸದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪುರುಷರ ಆವೃತ್ತಿಯ ಟಿ20 ವಿಶ್ವಕಪ್​ ಆತಿಥ್ಯವನ್ನು ವಹಿಸಿದೆ. ಈ ಹಿಂದೆ ಅಂದರೆ, 2020ರ ಫೆಬ್ರವರಿ-ಮಾರ್ಚ್​ನಲ್ಲಿ ಮಹಿಳಾ ಟಿ20 ವಿಶ್ವಕಪ್​ ಆತಿಥ್ಯ ವಹಿಸಿತ್ತು.

ಟಿ20 ಪಂದ್ಯಗಳು ಆಸ್ಟ್ರೇಲಿಯಾದ ಅಡಿಲೇಡ್​, ಬ್ರಿಸ್ಬೇನ್​, ಗೀಲಾಂಗ್​, ಹೋಬರ್ಟ್​, ಮೆಲ್ಬೋರ್ನ್​, ಪರ್ತ್​ ಮತ್ತು ಸಿಡ್ನಿ ಮೈದಾನಗಳಲ್ಲಿ ನಡೆಯಲಿವೆ.

ಭಾರತದ ವೇಳಾಪಟ್ಟಿ ಹೀಗಿದೆ...

1. ಅಕ್ಟೋಬರ್​ 23: ಎದುರಾಳಿ ಪಾಕಿಸ್ತಾನ, ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​

2. ಅಕ್ಟೋಬರ್​ 27: ಎದುರಾಳಿ ಗ್ರೂಪ್​ ಎ ರನ್ನರ್​ ಅಪ್​, ಸಿಡ್ನಿ ಕ್ರಿಕೆಟ್​ ಗ್ರೌಂಡ್​

3. ಅಕ್ಟೋಬರ್ 30: ಎದುರಾಳಿ ದಕ್ಷಿಣ ಆಫ್ರಿಕಾ, ಪರ್ತ್​ ಸ್ಟೇಡಿಯಂ

4. ನವೆಂಬರ್​ 02: ಎದುರಾಳಿ ಬಾಂಗ್ಲಾದೇಶ, ಅಡಿಲೇಡ್​ ಓವಲ್​

5. ನವೆಂಬರ್​ 06: ಎದುರಾಳಿ ಗ್ರೂಪ್​ ಬಿ ವಿನ್ನರ್​, ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​

2021ರ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಗ್ರೂಪ್​ ಹಂತದಲ್ಲೇ ಟೂರ್ನಿಯಿಂದ ಹೊರ ನಡೆದಿತ್ತು. ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ ಮುಗ್ಗರಿಸಿತ್ತು. ಅಲ್ಲದೆ, ನ್ಯೂಜಿಲೆಂಡ್​ ವಿರುದ್ಧವೂ ಸೋತಿತ್ತು. ಅಫ್ಘಾನಿಸ್ತಾನ, ಸ್ಕಾಟ್​ಲೆಂಡ್​ ಮತ್ತು ನಮಿಬಿಯಾ ವಿರುದ್ಧ ಗೆಲುವು ದಾಖಲಿಸಿದರೂ ಸಹ ಸಮಿಫೈನಲ್​ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಕಳೆದ ವರ್ಷದ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net