5 ಕೋಟಿ ರೂ. ಮೌಲ್ಯದ 2 ವಾಚ್​ ಸೀಜ್: ಗಂಭೀರ ಆರೋಪ ಬೆನ್ನಲ್ಲೇ ಹಾರ್ದಿಕ್​ ಪಾಂಡ್ಯ ಗರಂ​

Hardik
Published on

ಮುಂಬೈ: ದುಬೈನಿಂದ ಮರಳಿದಾಗ 5 ಕೋಟಿ ರೂ. ಮೌಲ್ಯದ ಎರಡು ವಾಚ್​ಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್​ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ಮಂಗಳವಾರ ವರದಿಯಾದ ಬೆನ್ನಲ್ಲೇ ಟೀಮ್​ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯ ಸ್ಪಷ್ಟನೆ ನೀಡಿದ್ದಾರೆ.

ಟಿ20 ವಿಶ್ವಕಪ್​ ಟೂರ್ನಿ ಮುಗಿದ ಹಿನ್ನೆಲೆಯಲ್ಲಿ ಹಾರ್ದಿಕ್​ ಪಾಂಡ್ಯ ತವರಿಗೆ ವಾಪಾಸ್ಸಾಗಿದ್ದಾರೆ. ದುಬೈನಿಂದ ಭಾನುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಾರ್ದಿಕ್ ಪಾಂಡ್ಯರನ್ನು ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ನಡೆಸಿದರು. ಈ ವೇಳೆ 5 ಕೋಟಿ ರೂ. ಮೌಲ್ಯದ ಎರಡು ವಾಚ್​ಗಳು ಪತ್ತೆಯಾಗಿವೆ. ಅದರ ಬಿಲ್​ ಕೇಳಿದ್ದಕ್ಕೆ ಇಲ್ಲ ಎಂಬ ಉತ್ತರ ಪಾಂಡ್ಯರಿಂದ ಬಂದಿದೆ. ಹೀಗಾಗಿ ವಾಚ್​ಗಳನ್ನು ಅಧಿಕಾರಿಗಳು ಸೀಜ್​ ಮಾಡಿದ್ದಾರೆ ಎಂದು ವರದಿಯಾಗಿದೆ.

ಇದೀಗ ಸ್ಪಷ್ಟನೆ ನೀಡಿರುವ ಪಾಂಡ್ಯ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ದುಬೈನಿಂದ ಆಗಮಿಸಿದ ಬಳಿಕ ನಾನೇ ಸ್ವಯಂ ಪ್ರೇರಿತವಾಗಿ ಕಸ್ಟಮ್ಸ್​ ಕೌಂಟರ್​ಗೆ ತೆರಳಿದೆ. ನಾನು ಖರೀದಿಸಿದ ವಾಚ್​ ಅನ್ನು ಸರಿಯಾದ ಮೌಲ್ಯಮಾಪನಕ್ಕಾಗಿ ಕಸ್ಟಮ್ಸ್​ ಅಧಿಕಾರಿಗಳು ತೆಗೆದುಕೊಂಡರು ಮತ್ತು ಅಗತ್ಯ ಕಸ್ಟಮ್ಸ್​ ಸುಂಕವನ್ನು ಕೂಡ ಪಾವತಿಸಿದ್ದೇನೆ ಎಂದು ಹಾರ್ದಿಕ್​ ಪಾಂಡ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದೆ. ಹೀಗಾಗಿ ಮುಂಬೈ ನಿಲ್ದಾಣದಲ್ಲಿ ಏನಾಯಿತು ಎಂಬುದರ ಕುರಿತು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ದುಬೈನಲ್ಲಿ ಕಾನೂನುಬದ್ಧವಾಗಿ ಖರೀದಿಸಿದ ಎಲ್ಲ ವಸ್ತುಗಳನ್ನು ಸ್ವಯಂ ಪ್ರೇರಿತವಾಗಿ ಕಸ್ಟಮ್ಸ್​ ಅಧಿಕಾರಿಗಳ ಮುಂದೆ ಘೋಷಿಸಿದ್ದೇನೆ. ಅಲ್ಲದೆ, ಅಗತ್ಯ ಕಸ್ಟಮ್ಸ್​ ಸುಂಕವನ್ನು ಪಾವತಿಸುವುದಾಗಿಯೂ ಹೇಳಿದೆ. ಅಧಿಕಾರಿಗಳು ಕೇಳಿದ ಎಲ್ಲ ದಾಖಲೆಗಳನ್ನು ಸಲ್ಲಿಸಲಾಯಿತು. ಆದಾಗ್ಯೂ ಕಸ್ಟಮ್ಸ್ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಬೇಕಾಗಿರುವುದರಿಂದ ಖರೀದಿಸಿದ ವಸ್ತುಗಳ ಸರಿಯಾದ ಮೌಲ್ಯಮಾಪನವನ್ನು ಮಾಡುತ್ತಿದೆ ಮತ್ತು ಸುಂಕ ಪಾವತಿಸಲು ನಾನು ಈಗಾಗಲೇ ದೃಢೀಕರಿಸಿದ್ದೇನೆಂದು ಹೇಳಿದ್ದಾರೆ.

ಇನ್ನು ಜಾಲತಾಣದಲ್ಲಿ ಹರಿದಾಡುತ್ತಿರುವಂತೆ ವಾಚ್​ನ ಮೌಲ್ಯ 5 ಕೋಟಿ ರೂ. ಅಲ್ಲ. 1.5 ಕೋಟಿ ಅಷ್ಟೇ. ಸುಖಾ ಸುಮ್ಮನೇ ವದಂತಿ ಹರಿಬಿಡಲಾಗುತ್ತಿದೆ. ನಾನು ಈ ನೆಲದ ಕಾನೂನು ಗೌರವಿಸುವಂತಹ ಪ್ರಜೆ ಮತ್ತು ಎಲ್ಲ ಸರ್ಕಾರಿ ಏಜೆನ್ಸಿಗಳನ್ನು ನಾನು ಗೌರವಿಸುತ್ತೇನೆ. ಮುಂಬೈ ಕಸ್ಟಮ್ಸ್​ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರವನ್ನು ಪಡೆದಿದ್ದೇನೆ. ಅಲ್ಲದೆ, ನಾನೂ ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದೇನೆ. ಅವರಿಗೆ ಬೇಕಾದ ಯಾವುದೇ ಕಾನೂನುಬದ್ಧ ದಾಖಲೆಗಳನ್ನು ನೀಡಲು ಸಿದ್ಧವಾಗಿದ್ದೇನೆ. ಕಾನೂನು ಗಡಿಗಳನ್ನು ದಾಟಿದ ನನ್ನ ವಿರುದ್ಧದ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

ಎಎನ್​ಐ ಪ್ರಕಾರ, ಹಾರ್ದಿಕ್ ಅವರ ಸಹೋದರ, ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರು ಕಳೆದ ವರ್ಷ ಬಹಿರಂಗಪಡಿಸದ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆದು ಇದೇ ವೇಳೆ ತಪಾಸಣೆ ನಡೆಸಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net