

ನವದೆಹಲಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಗಣೇಶನ ಮೂರ್ತಿಯನ್ನು ಹಿಡಿದು ನಿಂತಿರುವ ಫೋಟೋವೊಂದು #happyganeshchaturthi ಎಂಬ ಹ್ಯಾಶ್ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಬಿ ಡಿವಿಲಿಯರ್ಸ್ ಅಭಿಮಾನಿಗಳ ಇನ್ಸ್ಟಾಗ್ರಾಂ ಫ್ಯಾನ್ಸ್ ಪೇಜ್ನಲ್ಲಿ ಈ ಫೋಟೋ ಅಪ್ಲೋಡ್ ಮಾಡಿದ್ದು, ಗಣೇಶ ಹಬ್ಬಕ್ಕೆ ಶುಭಕೋರಿದ್ದಾರೆ. ಆದರೆ, ಈ ಫೋಟೋ ಕುರಿತು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಫ್ಯಾಕ್ಟ್ಚೆಕ್ ನಡೆಸಿದ್ದು, ಇದೊಂದು ತಿರುಚಿರುವ ಫೋಟೋ ಎಂಬ ತಿಳಿದುಬಂದಿದೆ.
ಅಧಿಕೃತ ಫೋಟೋದಲ್ಲಿ ಡಿವಿಲಿಯರ್ಸ್ ಹಿಡಿದಿರುವ ಟ್ರೋಫಿಯನ್ನು. ಅದನ್ನು ಎಡಿಟ್ ಮಾಡಿ ಗಣೇಶನ ಮೂರ್ತಿಯನ್ನು ಹಿಡಿದಿರುವಂತೆ ತಿರುಚಲಾಗಿದೆ. ಅಧಿಕೃತ ಫೋಟೋವನ್ನು 2017ರಲ್ಲಿ ಲಂಡನ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪತ್ರಿಕಾಗೋಷ್ಠಿಯ ವೇಳೆ ತೆಗೆಯಲಾಗಿದೆ. ಸದ್ಯ ಗಣೇಶನ ಮೂರ್ತಿ ಹಿಡಿದಿರುವಂತೆ ತಿರುಚಿರುವ ಫೋಟೋ ವೈರಲ್ ಆಗಿದ್ದು, ಈ ವರ್ಷವಾದರೂ ಗಣೇಶನ ಆಶೀರ್ವಾದದೊಂದಿಗೆ ಆರ್ಸಿಬಿ ಕಪ್ ಗೆಲ್ಲಲಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ವೈರಲ್ ಚಿತ್ರದ ಹಿಂದೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿ-2017 ಎಂದು ಬರೆದಿರುವುದನ್ನು ನೀವು ಗಮನಿಸಬಹುದು. ಇದೇ ಸುಳಿವಿನ ಮೇಲೆ ಫೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ಅಧಿಕೃತ ಫೋಟೋವನ್ನು ಐಸಿಸಿ 2017ರ ಜೂನ್ 3ರಂದು ಟ್ವೀಟ್ ಮಾಡಿರುವುದು ಪತ್ತೆಯಾಗಿದೆ. ಅದರಲ್ಲಿ ಡಿವಿಲಿಯರ್ಸ್ ಹಿಡಿದಿರುವುದು ಟ್ರೋಫಿಯೇ ಹೊರತು ಗಣೇಶನ ಮೂರ್ತಿಯಲ್ಲ. ಜೂನ್ 2ರಂದು ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ನ ಪತ್ರಿಕಾಗೋಷ್ಠಿಯಲ್ಲಿ ಸೆರೆಹಿಡಿಯಲಾಯಿತು. ಆ ವೇಳೆ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದರು. ಶ್ರೀಲಂಕಾ ವಿರುದ್ಧದ ತಮ್ಮ ಪಂದ್ಯಕ್ಕೂ ಮುನ್ನ ಪ್ರೆಸ್ಮೀಟ್ನಲ್ಲಿ ಮಾತನಾಡಿದ್ದರು.
ಇದೇ ಚಿತ್ರದೊಂದಿಗೆ 2017 ಜೂನ್ 3ರಂದು ಎಕ್ಸ್ಪ್ರೆಸ್ ಹೆಸರಿನ ವೆಬ್ಸೈಟ್ ಒಂದು ಸುದ್ದಿಯನ್ನು ಪ್ರಕಟಿಸಿದೆ. ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಎರಡನೇ ಇನ್ನಿಂಗ್ಸ್ಗಾಗಿ ಬ್ಯಾಟಿಂಗ್ ಮ್ಯಾಸ್ಟ್ರೋ ಎಬಿ ಡಿ ವಿಲಿಯರ್ಸ್ ಯುಎಇಗೆ ಆಗಮಿಸಿರುವುದಾಗಿ ಘೋಷಿಸಿತ್ತು. ಸೆಪ್ಟೆಂಬರ್ 19 ರಂದು ಐಪಿಎಲ್ ಎರಡನೇ ಇನ್ನಿಂಗ್ಸ್ ಆರಂಭವಾಗಲಿದೆ.
ಹಲವಾರು ದೇಶಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ ಎಂಬುದು ನಿಜವಾಗಿದ್ದರೂ, ಎಬಿ ಡಿವಿಲಿಯರ್ಸ್ ಅವರ ಎಡಿಟೆಡ್ ಚಿತ್ರವನ್ನು ಈ ಸಂದರ್ಭದಲ್ಲಿ ಪ್ರಸಾರ ಮಾಡಲಾಗುತ್ತಿದೆ, ಇದು ಅವರು ಗಣೇಶನ ವಿಗ್ರಹವನ್ನು ಹಿಡಿದಿರುವುದನ್ನು ತೋರಿಸುತ್ತದೆ. ಆದರೆ, ಇದು ನಿಜವಲ್ಲ ಎಂಬುದು ಫ್ಯಾಕ್ಟ್ಚೆಕ್ನಿಂದ ತಿಳಿದುಬಂದಿದೆ. (ಏಜೆನ್ಸೀಸ್)