ಏಷ್ಯಾ ಕಪ್​ 2022: ಟೀಮ್​ ಇಂಡಿಯಾ ಬೌಲಿಂಗ್​ ದಾಳಿ ತತ್ತರಿಸಿ ಸಾಧಾರಣ ಮೊತ್ತದ ಗುರಿ ನೀಡಿದ ಪಾಕ್​

Pak
Published on

ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ವಿಶ್ವ ಕ್ರಿಕೆಟ್​ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಟೀಮ್​ ಇಂಡಿಯಾ ಉತ್ತಮ ಬೌಲಿಂಗ್​ ದಾಳಿಯ ನೆರವಿನಿಂದ ಎದುರಾಳಿ ಪಾಕ್​ ತಂಡವನ್ನು 19.5 ಓವರ್​ಗಳಲ್ಲಿ ಆಲ್​ ಔಟ್​ ಮಾಡುವ ಮೂಲಕ 147 ರನ್​ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಪಾಕ್​ಗೆ ಆರಂಭದಲ್ಲಿ ಆಘಾತವಾಯಿತು. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ನಾಯಕ ಬಾಬರ್​ ಅಜಾಮ್​ ಕೇವಲ 10 ರನ್​ಗೆ ನಿರ್ಗಮಿಸುವ ಮೂಲಕ ಪಾಕ್​ಗೆ ಭಾರಿ ಹೊಡೆತ ನೀಡಿದರು. ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಫಖರ್​ ಅಹ್ಮದ್​ ಕೂಡ (10) ಭರವಸೆ ಉಳಿಸಿಕೊಳ್ಳಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಇಫ್ತಿಕರ್​ ಅಹ್ಮದ್​, ಆರಂಭಿಕ ಆಟಗಾರ ಮೊಹಮ್ಮದ್​ ರಿಜ್ವಾನ್​ಗೆ ಸಾಥ್​ ನೀಡಿ, ಕೆಲ ಕಾಲ ಕ್ರೀಸ್​ನಲ್ಲಿ ಉಳಿದರು. ಪಾಕ್​ ತಂಡದ ಮೊತ್ತ 87 ರನ್​ ಆಗಿದ್ದಾಗ ಇಫ್ತಿಕರ್ ಅಹ್ಮದ್​​ (28) ನಿರ್ಗಮಿಸಿದರೆ, ಅದರ ಬೆನ್ನಲ್ಲೇ ರಿಜ್ವಾನ್​ (43) ಸಹ ಹಿಂದಿರುಗಿದರು. ತಂಡದ ಮೊತ್ತ 94 ರನ್​ ಇದ್ದಾಗಲೇ ಪಾಕ್​ ತಂಡ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಉಳಿದಂತೆ, ಖುಷ್ದಿಲ್ ಶಾ (2), ಶಾದಾಬ್ ಖಾನ್ (10), ಆಸಿಫ್ ಅಲಿ (9), ಮೊಹಮ್ಮದ್ ನವಾಜ್ (1) , ನಸೀಮ್ ಶಾ (0) ಪಾಕ್​ ತಂಡಕ್ಕೆ ನೆರವಾಗಲಿಲ್ಲ. ಕೊನೆಯಲ್ಲಿ ಅಬ್ಬರಿಸಿದ ಶಹನವಾಜ್ ದಹಾನಿ 6 ಎಸೆತಗಳಲ್ಲಿ 16 ರನ್​ ಗಳಿಸಿ ತಂಡಕ್ಕೆ ನೆರವಾದರೆ, ಹಾರಿಸ್ ರೌಫ್ 13 ರನ್​ ಗಳಿಸಿ ಅಜೇಯರಾಗಿ ಉಳಿದರು.

ಭಾರತದ ಪರ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಭುವನೇಶ್ವರ್​ ಪ್ರಮುಖ 4 ವಿಕೆಟ್​ ಕಬಳಿಸಿದರೆ, ಹಾರ್ದಿಕ್​ ಪಾಂಡ್ಯ 3 ವಿಕೆಟ್​ ಹಾಗೂ ಅರ್ಶದೀಪ್​ ಸಿಂಗ್​ 2 ವಿಕೆಟ್​ ಉರುಳಿಸುವ ಮೂಲಕ ಪಾಕ್ ಆಟಗಾರರನ್ನು ಕಾಡಿದರು. ಅವೇಶ್​ ಖಾನ್​ ಒಂದು ವಿಕೆಟ್​​ಗೆ ತೃಪ್ತಿಪಟ್ಟುಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net