

ನವದೆಹಲಿ: ಟೀಮ್ ಇಂಡಿಯಾದ ಲೆಜೆಂಡರಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ( R Ashwin ) ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ( ಬಿಬಿಎಲ್) ನಿಂದ ಹಿಂದೆ ಸರಿದಿದ್ದಾರೆ. ಮೊಣಕಾಲಿನ ಗಾಯದಿಂದಾಗಿ 15ನೇ ಆವೃತ್ತಿಯ ಬಿಬಿಎಲ್ನಿಂದ ಹೊರಗುಳಿದಿದ್ದಾರೆ.
ಅಂದಹಾಗೆ, ಅಶ್ವಿನ್ ಅವರು ಇತ್ತೀಚೆಗಷ್ಟೇ ಸಿಡ್ನಿ ಥಂಡರ್ ಫ್ರಾಂಚೈಸಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದೊಂದು ಐತಿಹಾಸಿಕ ಒಪ್ಪಂದವಾಗಿತ್ತು. ಏಕೆಂದರೆ, ಇಲ್ಲಿಯವರೆಗೂ ಯಾವುದೇ ಭಾರತೀಯ ಕ್ರಿಕೆಟಿಗ ಕೂಡ ಬಿಬಿಎಲ್ನಲ್ಲಿ ಆಡಿಲ್ಲ. ಚೊಚ್ಚಲ ಬಿಬಿಎಲ್ ಆಡಲು ಅಶ್ವಿನ್ ಕೂಡ ತುಂಬಾ ಉತ್ಸುಕರಾಗಿದ್ದರು. ಆದರೆ, ಗಾಯದಿಂದಾಗಿ ಹೊರಗುಳಿಯಬೇಕಾದ ಅನಿವಾರ್ಯತೆ ಇದೀಗ ಎದುರಾಗಿದೆ.
ಅಶ್ವಿನ್ ಅವರು ಮೊಣಕಾಲು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಇಡೀ ಸೀಸನ್ನಿಂದ ಹೊರಗುಳಿಯಲಿದ್ದಾರೆ ಎಂದು ಸಿಡ್ನಿ ಥಂಡರ್ ಮ್ಯಾನೇಜ್ಮೆಂಟ್ ಘೋಷಣೆ ಮಾಡಿದೆ. ಅಶ್ವಿನ್ ಅವರ ಸೇವೆ ನಮ್ಮ ತಂಡಕ್ಕೆ ಲಭ್ಯವಾಗದೇ ಇರುವುದು ನಮ್ಮ ದುರಾದೃಷ್ಟ ಎಂದು ಥಂಡರ್ ಫ್ರಾಂಚೈಸಿಯ ಜನರಲ್ ಮ್ಯಾನೇಜರ್ ಹೇಳಿದ್ದಾರೆ. ಅಲ್ಲದೆ, ಅಶ್ವಿನ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದಿದ್ದಾರೆ.
ಮತ್ತೊಂದೆಡೆ, ಬಿಗ್ ಬ್ಯಾಷ್ ಲೀಗ್ ಮಿಸ್ ಮಾಡಿಕೊಂಡಿದ್ದಕ್ಕಾಗಿ ಅಶ್ವಿನ್ ಕೂಡ ಬೇಸರ ಹೊರಹಾಕಿದ್ದಾರೆ. ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದಕ್ಕಾಗಿ ಅಶ್ವಿನ್ ಅವರು ಕ್ಷಮೆಯಾಚಿಸಿದ್ದಾರೆ.
ಮುಂಬರುವ ಸೀಸನ್ಗೆ ತಯಾರಿ ನಡೆಸಲು ಚೆನ್ನೈನಲ್ಲಿ ತರಬೇತಿ ಪಡೆಯುತ್ತಿದ್ದಾಗ, ನನ್ನ ಮೊಣಕಾಲಿಗೆ ಗಾಯವಾಯಿತು. ಸದ್ಯಕ್ಕೆ ನಾನೀಗ ಚಿಕಿತ್ಸೆ ಪಡೆಯಬೇಕಿದೆ. ಆದ್ದರಿಂದ ನಾನು ಬಿಬಿಎಲ್ ಸೀಸನ್ 15ರಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಇದನ್ನು ಹೇಳಲು ಕೂಡ ನನಗೆ ಕಷ್ಟವಾಗುತ್ತಿದೆ. ಸಿಡ್ನಿ ಥಂಡರ್ಸ್ ತಂಡದ ಭಾಗವಾಗಲು ಮತ್ತು ನಿಮ್ಮ ಮುಂದೆ ಆಡಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೆ. ಆದರೆ, ನಾನೀಗ ಪುನರ್ವಸತಿ, ಚೇತರಿಕೆ ಮತ್ತು ಮತ್ತೆ ಆಟಕ್ಕೆ ಮರಳುವ ಕಡೆ ಕೆಲಸ ಮಾಡಬೇಕಿದೆ. ನಾನು ಪಂದ್ಯದಲ್ಲಿ ಭಾಗವಹಿಸುವ ಮುನ್ನವೇ ನನ್ನನ್ನು ಸ್ವಂತ ಮನೆಯವರಂತೆ ಉಪಚರಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಾನು ಪ್ರತಿ ಪಂದ್ಯವನ್ನು ವೀಕ್ಷಿಸುತ್ತೇನೆ. ದಯವಿಟ್ಟು ಕ್ರೀಡಾಂಗಣವನ್ನು ತುಂಬಿಸಿ ಮತ್ತು ಗದ್ದಲವನ್ನು ಹೆಚ್ಚಿಸಿ. ನಿಮ್ಮ ಬೆಂಬಲವು ನಮಗೆ ಮುಖ್ಯವಾಗಿದೆ. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಅಶ್ವಿನ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಅಂದಹಾಗೆ, 2025-26 ರ ಬಿಗ್ ಬ್ಯಾಷ್ ಲೀಗ್ ಡಿಸೆಂಬರ್ 14 ರಂದು ಪ್ರಾರಂಭವಾಗಲಿದೆ. ಅಶ್ವಿನ್ ಪ್ರತಿನಿಧಿಸಲಿರುವ ಸಿಡ್ನಿ ಥಂಡರ್, ಡಿಸೆಂಬರ್ 16 ರಂದು ಹೋಬಾರ್ಟ್ ಹರಿಕೇನ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ವೆಸ್ ಅಗರ್, ಟಾಮ್ ಆಂಡ್ರ್ಯೂಸ್, ಕ್ಯಾಮರೂನ್ ಬ್ಯಾನ್ಕ್ರಾಫ್ಟ್, ಸ್ಯಾಮ್ ಬಿಲ್ಲಿಂಗ್ಸ್, ಓಲ್ಲಿ ಡೇವಿಸ್, ಲಾಕಿ ಫರ್ಗುಸನ್, ಮ್ಯಾಥ್ಯೂ ಗಿಲ್ಕ್ಸ್, ಕ್ರಿಸ್ ಗ್ರೀನ್, ರಯಾನ್ ಹ್ಯಾಡ್ಲಿ, ಶದಾಬ್ ಖಾನ್, ಸ್ಯಾಮ್ ಕಾನ್ಸ್ಟಾಸ್, ನಾಥನ್ ಮೆಕ್ಆಂಡ್ರ್ಯೂ, ಬ್ಲೇಕ್ ನಿಕಿತಾರಸ್, ಡೇವಿಡ್, ಅಡಿಯನ್ ಓ'ಕಾನರ್, ಡೇನಿಯಲ್ ಸ್ಯಾಮ್ಸ್, ತನ್ವೀರ್ ಸಂಘ, ಡೇವಿಡ್ ವಾರ್ನರ್. (ಏಜೆನ್ಸೀಸ್)