ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದಲ್ಲಿ ಇದೊಂದು ಬದಲಾವಣೆ ಅಗತ್ಯವಿದೆ! ಆಯ್ಕೆಗಾರರಿಗೆ ಆರ್​. ಅಶ್ವಿನ್​ ಸಲಹೆ | R Ashwin

ವಿಜಯವಾಣಿ - 2025-02-04T164848.447
Published on

R Ashwin: ಪ್ರಸ್ತುತ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿರುವ ಟೀಮ್ ಇಂಡಿಯಾ ಇದೇ ಫೆ.19ರಿಂದ ಪ್ರಾರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಸನ್ನದ್ಧಗೊಂಡಿದೆ. ಈಗಾಗಲೇ ತಂಡ ಕೂಡ ಪ್ರಕಟವಾಗಿದ್ದು, ಸ್ಟಾರ್​ ಆಟಗಾರರ ಮೇಲೆ ಭಾರೀ ನಿರೀಕ್ಷೆ ಹೆಚ್ಚಿದೆ. ಅತಿಥೇಯ ಪಾಕಿಸ್ತಾನ ನೆಲಕ್ಕೆ ಹೋಗಲು ಬಯಸದ ಭಾರತ ತನ್ನ ಪಂದ್ಯಗಳನ್ನು ಈಗ ಹೈಬ್ರಿಡ್​ ಮಾದರಿಯಲ್ಲಿ ಆಡಲಿದೆ. ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆರ್​. ಅಶ್ವಿನ್​ ಮಾತನಾಡಿ, ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಆಗಬೇಕಿದೆ ಎಂದು ಅಭಿಪ್ರಾಯಿಸಿದ್ದಾರೆ.

ಇತ್ತೀಚೆಗಷ್ಟೇ ಇಂಗ್ಲೆಂಡ್​​ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 4-1 ಅಂತರದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿತು. ಈ ಟೂರ್ನಿಯಲ್ಲಿ ಐದಕ್ಕೆ ಐದು ಪಂದ್ಯಗಳನ್ನಾಡಿದ ಸ್ಪಿನ್ನರ್​ ವರುಣ್ ಚಕ್ರವರ್ತಿ, ಆಂಗ್ಲರ ವಿಕೆಟ್​ ಕಿತ್ತು ಬಿಸಾಡುವಲ್ಲಿ ಅದ್ಭುತ ಪ್ರದರ್ಶನ ತೋರಿದರು. ಇದಕ್ಕಾಗಿ ಸರಣಿಯ ಶ್ರೇಷ್ಠ ಪ್ರಶಸ್ತಿಯನ್ನೂ ಸ್ವೀಕರಿಸಿದರು. ಐದು ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ ವರುಣ್​ಗೆ ಚಾಂಪಿಯನ್ಸ್​ ಟ್ರೋಫಿಯ ಭಾರತ ತಂಡದಲ್ಲಿ ಸ್ಥಾನ ಸಿಗದಿರುವುದು ಅಶ್ವಿನ್​ಗೆ ಬೇಸರ ತಂದಿದೆ.

ಆಯ್ಕೆಗಾರರಿಗೆ ಬಿಟ್ಟದ್ದು

"2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಜಾಗತಿಕ ಟೂರ್ನಿಗಾಗಿ ಮೆನ್ ಇನ್ ಬ್ಲೂ ತನ್ನ 15 ಸದಸ್ಯರ ತಂಡವನ್ನು ಈಗಾಗಲೇ ಘೋಷಿಸಿದೆ. ಎಲ್ಲರೂ ಉತ್ತಮ ಆಟಗಾರರೇ. ಈ ತಂಡದಲ್ಲಿ ಚಾಂಪಿಯನ್ ಸ್ಪಿನ್ನರ್ ಆದ ವರುಣ್​ ಆಡುವುದು ಉತ್ತಮ. ಈ ಕುರಿತಂತೆ ಆಯ್ಕೆಗಾರರು ಚಿಂತಿಸಿ, ನಿರ್ಧಾರ ಕೈಗೊಳ್ಳುವುದು ಸೂಕ್ತ" ಎಂದಿದ್ದಾರೆ.

"ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಈ ಟೂರ್ನಿಗಾಗಿ ಪ್ರಯಾಣಿಸಲಿರುವ ಸ್ಪಿನ್ನರ್​ಗಳು. ತಂಡದಲ್ಲಿ ಯಾವುದೇ ಬದಲಾವಣೆ ಬೇಕಿದ್ದರೆ ಅಥವಾ ಅಗತ್ಯವಿದ್ದರೆ ಅದಕ್ಕೆ ಫೆಬ್ರವರಿ ಎರಡನೇ ವಾರದವರೆಗೂ ಅವಕಾಶವಿದೆ. ಪ್ರಕಟಿಸಲಾದ ಬೌಲರ್​ಗಳ ಪೈಕಿ ವೇಗಿಯ ಜಾಗಕ್ಕೆ ವರುಣ್ ಬಂದರೆ, ಸ್ಪಿನ್ನರ್‌ಗಳ ಸಂಖ್ಯೆ ಐದಕ್ಕೆ ಏರುತ್ತದೆ. ಇದು ತಂಡದ ಗೆಲುವಿನಲ್ಲಿ ಉತ್ತಮ ಫಲಿತಾಂಶ ನೀಡಬಹುದು" ಎಂದು ಅಶ್ವಿನ್​ ಟೀಮ್ ಇಂಡಿಯಾ ಆಯ್ಕೆಗಾರರಿಗೆ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net