

ಒಡೆನ್ಸ್: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಹಾಲಿ ವರ್ಷದ ಪ್ರಶಸ್ತಿ ಬರ ಡೆನ್ಮಾರ್ಕ್ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯಲ್ಲೂ ಮುಂದುವರಿದಿದೆ. ಸ್ಪೇನ್ ತಾರೆ ಕ್ಯಾರೊಲಿನ್ ಮರಿನ್ ವಿರುದ್ಧದ ಜಿದ್ದಾಜಿದ್ದಿನ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು 18-21, 21-19, 7-21 ಗೇಮ್ಗಳಿಂದ ಪರಾಭವಗೊಂಡರು.
ಒಂದು ಗಂಟೆ 13 ನಿಮಿಷಗಳ ಕಾಲ ನಡೆದ ರೋಚಕ ಕಾದಾಟದ ನಡುವೆ ಉಭಯ ಆಟಗಾರ್ತಿಯರ ನಡುವೆ ವಾಗ್ವಾದವೂ ನಡೆಯಿತು. ಇದಕ್ಕಾಗಿ ಅಂಪೈರ್ ಇಬ್ಬರಿಗೂ ಹಳದಿ ಕಾರ್ಡ್ ನೀಡಿದರು. 2016ರ ರಿಯೋ ಒಲಿಂಪಿಕ್ಸ್ ಫೈನಲ್ನಲ್ಲಿ ಮರಿನ್ಗೆ ಮಣಿದು ರಜತಕ್ಕೆ ತೃಪ್ತಿಪಟ್ಟಿದ್ದ ಸಿಂಧು ನಂತರದಲ್ಲಿ ಸ್ನೇಹಿತೆಯರಾಗಿದ್ದರು. ಆದರೆ ಇದೀಗ ಇವರಿಬ್ಬರ ನಡುವಿನ ಜಗಳ ಅಚ್ಚರಿಗೆ ಕಾರಣವಾಗಿದೆ.
ಕಳೆದ ವಾರ ಆರ್ಕ್ಟಿಕ್ ಓಪನ್ನಲ್ಲೂ ಸಿಂಧು ಉಪಾಂತ್ಯದಲ್ಲಿ ಎಡವಿದ್ದರು. ಮರಿನ್ ವಿರುದ್ಧ ಸಿಂಧುಗೆ ಇದು ಸತತ 5ನೇ ಸೋಲಾಗಿದೆ. 2018ರ ವಿಶ್ವ ಚಾಂಪಿಯನ್ಷಿಪ್ ಫೈನಲ್ನಲ್ಲೂ ಮರಿನ್ಗೆ ಸಿಂಧು ಶರಣಾಗಿದ್ದರು.