ಮಯಾಂಕ್‌ಗೆ ನಾಯಕತ್ವ ನೀಡಲು ಪಂಜಾಬ್ ಕಿಂಗ್ಸ್ ಸಿದ್ಧ, ಆದರೆ ಷರತ್ತುಗಳು ಅನ್ವಯ!

mayank web
Published on

ನವದೆಹಲಿ: ಕೆಎಲ್ ರಾಹುಲ್ ಈಗಾಗಲೆ ಲಖನೌ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಮತ್ತೋರ್ವ ಕನ್ನಡಿಗನಿಗೆ ನಾಯಕತ್ವ ಒಲಿಯುವ ಸಾಧ್ಯತೆ ಕಾಣಿಸಿಕೊಂಡಿದೆ. ಅವರೇ ಮಯಾಂಕ್ ಅಗರ್ವಾಲ್. ಈಗಾಗಲೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ರಿಟೇನ್ ಆಗಿರುವ ಮಯಾಂಕ್‌ಗೆ ನಾಯಕತ್ವ ನೀಡುವ ಚಿಂತನೆಗಳು ನಡೆದಿವೆ. ಆದರೆ ಇದಕ್ಕೆ ಕೆಲವು ಷರತ್ತುಗಳು ಅನ್ವಯಿಸಲಿವೆ.

ಮುಂಬರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೆಲವು ಆಟಗಾರರ ಮೇಲೆ ಪಂಜಾಬ್ ಕಿಂಗ್ಸ್ ತಂಡ ಕಣ್ಣಿಟ್ಟಿದೆ. ಆ ಆಟಗಾರರು ಹರಾಜಿನಲ್ಲಿ ಒಲಿಯದೇ ಹೋದರೆ ಮಯಾಂಕ್‌ಗೆ ನಾಯಕತ್ವ ನೀಡಲು ಪಂಜಾಬ್ ಕಿಂಗ್ಸ್ ತಂಡ ಚಿಂತನೆ ನಡೆಸಿದೆ. ಮಯಾಂಕ್ ಅವರನ್ನು ರಿಟೇನ್ ಮಾಡಿಕೊಂಡಾಗಲೇ ನಾಯಕತ್ವ ನೀಡುವ ಸೂಚನೆ ಕಾಣಿಸಿತ್ತು. ಆದರೆ ಮಯಾಂಕ್‌ಗೆ ನಾಯಕತ್ವದ ಅನುಭವವಿಲ್ಲ. ಇದೊಂದು ಕಾರಣಕ್ಕಾಗಿ ಪಂಜಾಬ್ ಕಿಂಗ್ಸ್ ಟೀಮ್ ಮ್ಯಾನೇಜ್‌ಮೆಂಟ್ ಈ ವರ್ಷವೇ ಅವರಿಗೆ ನಾಯಕತ್ವ ನೀಡಲು ಹಿಂದೇಟು ಹಾಕುತ್ತಿದೆ.

ಮಯಾಂಕ್ ದೇಶೀಯ ಕ್ರಿಕೆಟ್‌ನಲ್ಲೂ ಎಂದಿಗೂ ಕರ್ನಾಟಕ ತಂಡವನ್ನು ಮುನ್ನಡೆಸಿಲ್ಲ. ಕಳೆದ ವರ್ಷ ಕೆಎಲ್ ರಾಹುಲ್ ಗೈರಿನಲ್ಲಿ ಒಂದು ಪಂದ್ಯದಲ್ಲಿ ಅವರು ಪಂಜಾಬ್ ತಂಡವನ್ನು ಮುನ್ನಡೆಸಿದ್ದರು. ಆದರೆ ಆ ಪಂದ್ಯದಲ್ಲಿ ಪಂಜಾಬ್ ತಂಡ ಸೋಲು ಕಂಡಿತ್ತು. ಹೀಗಾಗಿ ಅವರಿಗೆ ಪೂರ್ಣ ಪ್ರಮಾಣದ ನಾಯಕತ್ವ ವಹಿಸುವ ಮುನ್ನ ಕಾದು ನೋಡಲು ಬಯಸಿದೆ.

ತಂಡದ ನಾಯಕತ್ವವನ್ನೂ ವಹಿಸಬಹುದಾದ ಕೆಲ ಆಟಗಾರರಿಗೆ ಹರಾಜಿನಲ್ಲಿ ಗಾಳ ಹಾಕಲು ಪಂಜಾಬ್ ಕಿಂಗ್ಸ್ ತಂಡ ಯೋಜಿಸಿದೆ. ಆ ಆಟಗಾರರೆಂದರೆ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕರ್ನಾಟಕದ ಮನೀಷ್ ಪಾಂಡೆ, ಇಂಗ್ಲೆಂಡ್‌ನ ಇವೊಯಿನ್ ಮಾರ್ಗನ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಆರನ್ ಫಿಂಚ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್. ಇವರು ಹರಾಜಿನಲ್ಲಿ ನಿರೀಕ್ಷಿತ ಮೊತ್ತಕ್ಕೆ ಒಲಿಯದಿದ್ದರೆ, ಮಯಾಂಕ್‌ಗೆ ನಾಯಕತ್ವ ವಹಿಸುವ ಸುರಕ್ಷಿತ ಆಯ್ಕೆಯನ್ನು ಪಂಜಾಬ್ ಕಿಂಗ್ಸ್ ಟೀಮ್ ಮ್ಯಾನೇಜ್‌ಮೆಂಟ್ ಇಟ್ಟುಕೊಂಡಿದೆ.

ಹರಾಜಿಗೆ ಮುನ್ನ ಪಂಜಾಬ್ ಕಿಂಗ್ಸ್ ತಂಡ ಉಳಿದೆಲ್ಲ ತಂಡಗಳಿಗಿಂತ ಗರಿಷ್ಠ ಅಂದರೆ 72 ಕೋಟಿ ರೂ. ಬಜೆಟ್ ಉಳಿಸಿಕೊಂಡಿದೆ. ಹೀಗಾಗಿ ನಾಯಕತ್ವ ವಹಿಸಬಲ್ಲ ಆಟಗಾರರನ್ನು ಸೆಳೆಯಲು ಪಂಜಾಬ್ ಹೆಚ್ಚಿನ ಅನುಕೂಲ ಹೊಂದಿದೆ. ಆಗ ಮಯಾಂಕ್ ಅಗರ್ವಾಲ್ ನಾಯಕತ್ವ ವಹಿಸಲು ಇನ್ನೂ ಕೆಲ ಆವೃತ್ತಿಗಳ ಕಾಲ ಕಾಯಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net