More

    ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ಅಹರ್ನಿಶಿ ಟೆಸ್ಟ್, ಪಿಂಕ್​ ಬಾಲ್​ ಪಂದ್ಯಕ್ಕೆ ಚಿನ್ನಸ್ವಾಮಿ ಆತಿಥ್ಯ

    ಬೆಂಗಳೂರು: ಎಲ್ಲವೂ ಬಿಸಿಸಿಐ ಯೋಜನೆಯಂತೆಯೇ ನಡೆದರೆ ಮುಂದಿನ ತಿಂಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ. ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈ ಪಿಂಕ್ ಬಾಲ್ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆತಿಥೇಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಇದನ್ನು ಖಚಿತಪಡಿಸಿದೆ.

    ಹಾಲಿ ವೇಳಾಪಟ್ಟಿಯ ಪ್ರಕಾರ, ಫೆಬ್ರವರಿ 25ರಿಂದ ಬೆಂಗಳೂರಿನಿಂದಲೇ ಟೆಸ್ಟ್ ಸರಣಿ ಆರಂಭಗೊಳ್ಳಬೇಕಿತ್ತು ಮತ್ತು ಸರಣಿಯ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 5ರಿಂದ ಮೊಹಾಲಿಯಲ್ಲಿ ನಡೆಯಬೇಕಿತ್ತು. ಬಳಿಕ ಮಾಚ್ 13ರಿಂದ 18ರವರೆಗೆ 3 ಟಿ20 ಪಂದ್ಯಗಳ ಸರಣಿ ನಿಗದಿಯಾಗಿತ್ತು. ಆದರೆ ಈಗಾಗಲೆ ಶ್ರೀಲಂಕಾ ಟಿ20 ಸರಣಿಯನ್ನು ಮೊದಲು ನಡೆಸಬೇಕು ಎಂದು ಬೇಡಿಕೆ ಸಲ್ಲಿಸಿರುವುದರಿಂದ ಬಿಸಿಸಿಐ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ.

    ಪ್ರವಾಸಕ್ಕೆ ಮುನ್ನ ಆಸೀಸ್ ವಿರುದ್ಧ ಟಿ20 ಸರಣಿ ಆಡಲಿರುವ ಲಂಕಾ, ಅದೇ ತಂಡವನ್ನು ನೇರವಾಗಿ ಭಾರತದ ಬಯೋಬಬಲ್‌ಗೂ ತರಲು ಬಯಸಿದೆ. ಇನ್ನು ಭಾರತ ಕೂಡ ಲಂಕಾವನ್ನು ಎದುರಿಸುವ ಮುನ್ನ ಕೊನೆಯದಾಗಿ ವಿಂಡೀಸ್ ವಿರುದ್ಧ ಟಿ20 ಸರಣಿಯನ್ನೇ ಆಡಲಿದೆ. ಹೀಗಾಗಿ ಬಿಸಿಸಿಐ ಟಿ20 ಸರಣಿಯನ್ನು ಮೊದಲು ಆಯೋಜಿಸಲು ಒಪ್ಪಿಕೊಂಡಿದೆ.

    ಲಂಕಾ ವಿರುದ್ಧ ಟಿ20 ಸರಣಿಯ 3 ಪಂದ್ಯಗಳು ಮೊಹಾಲಿ, ಧರ್ಮಶಾಲಾ ಮತ್ತು ಲಖನೌದಲ್ಲಿ ನಿಗದಿಯಾಗಿವೆ. ಅಂದರೆ ಉತ್ತರ ಭಾರತದ ನಗರಗಳಲ್ಲೇ ಈ ಪಂದ್ಯಗಳು ನಡೆಯಲಿವೆ. ಹೀಗಾಗಿ ಕರೊನಾ ಕಾಲದ ಪ್ರಯಾಣ ತಾಪತ್ರಯವನ್ನು ತಪ್ಪಿಸುವ ಸಲುವಾಗಿ ದಕ್ಷಿಣ ಭಾರತದ ಬೆಂಗಳೂರು ನಗರದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಬದಲಾಗಿ 2ನೇ ಟೆಸ್ಟ್ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಗುರುವಾರ ಅಧಿಕೃತವಾಗಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

    ಪ್ರಯಾಣಕ್ಕೆ ಕಡಿವಾಣ ಹಾಕಲು ಟಿ20 ಸರಣಿಯ ಮೊದಲ ಎರಡೂ ಪಂದ್ಯ ಧರ್ಮಶಾಲಾದಲ್ಲೇ ನಿಗದಿಯಾಗುವ ಸಾಧ್ಯತೆಗಳಿದ್ದು, ಬಳಿಕ ಕೊನೇ ಟಿ20 ಮತ್ತು ಮೊದಲ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ಇಬ್ಬನಿ ಸಮಸ್ಯೆಯಿಂದಾಗಿ ಮೊಹಾಲಿಯಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯ ಆಡುವುದು ಕಷ್ಟ. ಹೀಗಾಗಿ ಬೆಂಗಳೂರಿಗೆ ಈ ಅವಕಾಶ ಕಲ್ಪಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸದಾಗಿ 4.8 ಕೋಟಿ ರೂ. ವೆಚ್ಚದಲ್ಲಿ ಯೂನಿಪೋಲ್ ಫ್ಲಡ್‌ಲೈಟ್ ಟವರ್‌ಗಳನ್ನು ಅಳವಡಿಸಲಾಗಿದ್ದು, ಅದರಡಿಯಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇದಾಗಿರಲಿದೆ.

    3: ಬೆಂಗಳೂರು ಭಾರತದಲ್ಲಿ ಅಹರ್ನಿಶಿ ಟೆಸ್ಟ್ ಆಯೋಜಿಸಿದ 3ನೇ ತಾಣವೆನಿಸಲಿದೆ. ಈ ಮುನ್ನ 2019ರಲ್ಲಿ ಕೋಲ್ಕತ ಮತ್ತು 2021ರಲ್ಲಿ ಅಹಮದಾಬಾದ್‌ನಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧ ಅಹರ್ನಿಶಿ ಟೆಸ್ಟ್ ನಡೆದಿದ್ದವು.

    24: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ 23 ಟೆಸ್ಟ್ ಪಂದ್ಯ ನಡೆದಿದ್ದು, 24ನೇ ಟೆಸ್ಟ್ ಅಹರ್ನಿಶಿಯಾಗಿರಲಿದೆ. 1996ರ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಕ್ವಾರ್ಟರ್‌ೈನಲ್, ಚಿನ್ನಸ್ವಾಮಿಯಲ್ಲಿ ನಡೆದ ಮೊದಲ ಹೊನಲು ಬೆಳಕಿನ ಪಂದ್ಯವಾಗಿತ್ತು.

    *ಬೆಂಗಳೂರಿನಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯ ಆಯೋಜಿಸಲು ಸಿದ್ಧತೆ ನಡೆಸುವಂತೆ ಬಿಸಿಸಿಐನಿಂದ ಈಗಾಗಲೆ ಸೂಚನೆಗಳು ಬಂದಿವೆ. ಮಾರ್ಚ್ 12ರಿಂದ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದೇವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಯಶಸ್ವಿಯಾಗಿ ಆಯೋಜಿಸುವ ವಿಶ್ವಾಸದಲ್ಲಿದ್ದೇವೆ.
    | ವಿನಯ್ ಮೃತ್ಯುಂಜಯ್, ಕೆಎಸ್‌ಸಿಎ ಖಜಾಂಚಿ-ವಕ್ತಾರ

    ಮೊಹಾಲಿಯಲ್ಲಿ ಕೊಹ್ಲಿ 100ನೇ ಟೆಸ್ಟ್
    ಇದುವರೆಗೆ 99 ಟೆಸ್ಟ್ ಆಡಿರುವ ವಿರಾಟ್ ಕೊಹ್ಲಿ, ಲಂಕಾ ವಿರುದ್ಧ ಸರಣಿಯಲ್ಲಿ ಆಡಲಿರುವ ಮೊದಲ ಟೆಸ್ಟ್ ಅವರ 100ನೇ ಟೆಸ್ಟ್ ಪಂದ್ಯವಾಗಿರಲಿದೆ. ಆರ್‌ಸಿಬಿ ಆಟಗಾರರಾಗಿ ರಾಜ್ಯದ ಜನತೆಯ ಹೃದಯ ಗೆದ್ದಿರುವ ಕೊಹ್ಲಿ, ಬೆಂಗಳೂರಿನಲ್ಲೇ 100ನೇ ಟೆಸ್ಟ್ ಆಡುವ ನಿರೀಕ್ಷೆ ಇತ್ತು. ಲಂಕಾ ಸರಣಿಯ ವೇಳಾಪಟ್ಟಿ ಬದಲಾವಣೆಯಿಂದ ಮೊದಲ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ನಂತರ ಐಪಿಎಲ್ 15ನೇ ಆವೃತ್ತಿಗೆ ಮುನ್ನ ಭಾರತ ತಂಡ ಆಡಲಿರುವ ಕೊನೇ ಪಂದ್ಯ ಅಂದರೆ ಸರಣಿಯ 2ನೇ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಅಂದರೆ ಕೊಹ್ಲಿ ಬೆಂಗಳೂರಿನಲ್ಲಿ ತಮ್ಮ 101ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.

    ಹೊಸ ಫ್ಲಡ್‌ಲೈಟ್‌ನಡಿಯಲ್ಲಿ ಮೊದಲ ಪಂದ್ಯ
    ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸದಾಗಿ 4.8 ಕೋಟಿ ರೂಪಾಯಿ ವೆಚ್ಚದಲ್ಲಿ ಯೂನಿಪೋಲ್ ಫ್ಲಡ್‌ಲೈಟ್ ಟವರ್‌ಗಳನ್ನು ಅಳವಡಿಸಲಾಗಿದ್ದು, ಅದರಡಿಯಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇದಾಗಿರಲಿದೆ. 1969ರಲ್ಲಿ ನಿರ್ಮಾಣಗೊಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ 1995ರಲ್ಲಿ ಮೊದಲ ಬಾರಿಗೆ ಫ್ಲಡ್‌ಲೈಟ್ ಅಳವಡಿಸಲಾಗಿತ್ತು. 1996ರ ಏಕದಿನ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಕ್ವಾರ್ಟರ್​ಫೈನಲ್ ಇದರಡಿಯಲ್ಲಿ ನಡೆದ ಮೊದಲ ಹೊನಲು ಬೆಳಕಿನ ಪಂದ್ಯವಾಗಿತ್ತು. ಬಳಿಕ 2011ರ ವಿಶ್ವಕಪ್ ವೇಳೆ ಫ್ಲಡ್​ಲೈಟ್‌ನ ಬಲ್ಬ್‌ಗಳನ್ನಷ್ಟೇ ಬದಲಾಯಿಸಲಾಗಿತ್ತು. ಜಾಲರಿ (ಲ್ಯಾಟಿಸ್) ಸ್ವರೂಪದಲ್ಲಿದ್ದ 4 ಫ್ಲಡ್​ಲೈಟ್ ಟವರ್‌ಗಳನ್ನು ಯೂನಿಪೋಲ್ (ಏಕಕಂಬ) ಮಾದರಿಯ ಆಧುನಿಕ ತಂತ್ರಜ್ಞಾನಕ್ಕೆ ಬದಲಾಯಿಸಲಾಗಿದೆ. ಹೆಚ್ಚುವರಿ ಹ್ಯಾಲೈಡು ದೀಪಗಳನ್ನೂ ಇದಕ್ಕೆ ಅಳವಡಿಸಲಾಗಿದೆ. ಅಗತ್ಯ ಸಂದರ್ಭಗಳಲ್ಲಿ ಇದಕ್ಕೆ ಎಲ್‌ಇಡಿ ಬಲ್ಬ್‌ಗಳನ್ನೂ ಅಳವಡಿಸಬಹುದಾಗಿದೆ. ಸುಮಾರು 50 ಮೀಟರ್ ಎತ್ತರದ ಹೊಸ ಫ್ಲಡ್‌ಲೈಟ್ ಸ್ತಂಬಗಳು ಮೈಲ್ಡ್ ಸ್ಟೀಲ್‌ನದ್ದಾಗಿದ್ದು, ತುಕ್ಕು ನಿರೋಧಕವಾಗಿವೆ. ಇದರಲ್ಲಿ ಲಿಫ್ಟ್​ ವ್ಯವಸ್ಥೆಯೂ ಇರುವ ಕಾರಣ, ಬಲ್ಬ್ ಬದಲಾವಣೆಯೂ ಸುಲಭವಾಗಿರುತ್ತದೆ.

    ವಿಂಡೀಸ್ ಸರಣಿಗೆ ಮುನ್ನ ಕರೊನಾ ಶಾಕ್, ಟೀಮ್ ಇಂಡಿಯಾದ ಹಲವು ಸದಸ್ಯರಿಗೆ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts