

ಪುಣೆ: ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಕರ್ನಾಟಕ, ಟೀಮ್ ಇಂಡಿಯಾ ಮತ್ತು ಐಪಿಎಲ್‌ನಲ್ಲೂ ಹಿಂದಿನ 4 ವರ್ಷಗಳಲ್ಲಿ ಪಂಜಾಬ್ ಕಿಂಗ್ಸ್ ತಂಡಗಳ ಪರ ಜತೆಯಾಗಿಯೇ ಆಡುತ್ತ ಬಂದವರು. ಇದೀಗ ಐಪಿಎಲ್-15ರಲ್ಲಿ ಇವರಿಬ್ಬರೂ ಪರಸ್ಪರ ಎದುರಾಳಿ ತಂಡಗಳ ನಾಯಕರಾಗಿ ಮುಖಾಮುಖಿ ಆಗಲಿದ್ದಾರೆ. ಎಂಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಲಖನೌ ಸೂಪರ್‌ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಈ ಸ್ನೇಹಿತರ ಸವಾಲಿಗೆ ವೇದಿಕೆಯಾಗಲಿದೆ.
ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 3ರಲ್ಲಿ ಸೋತಿರುವ ಲಖನೌ ತಂಡ ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿನ ಗೆಲುವು ಕೆಎಲ್ ರಾಹುಲ್ ಬಳಗದ ಪ್ಲೇಆ್ ಹಾದಿಯನ್ನು ಸುಲಭಗೊಳಿಸಲಿದೆ. ಮತ್ತೊಂದೆಡೆ ಆಡಿದ 8 ಪಂದ್ಯಗಳಲ್ಲಿ ತಲಾ 4 ಜಯ-ಸೋಲು ಅನುಭವಿಸಿದ್ದು, 6ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಸೋತರೆ ಮಯಾಂಕ್ ಅಗರ್ವಾಲ್ ಬಳಗದ ಹಾದಿ ಕಠಿಣಗೊಳ್ಳಲಿದ್ದು, ಗೆಲುವಿನ ಹಂಬಲದಲ್ಲಿದೆ. ಕಳೆದ ಪಂದ್ಯದಲ್ಲಿ ಲಖನೌ ತಂಡ ಮುಂಬೈ ವಿರುದ್ಧ 36 ರನ್‌ಗಳಿಂದ ಗೆದ್ದಿದ್ದರೆ, ಪಂಜಾಬ್ 11 ರನ್‌ಗಳಿಂದ ಸಿಎಸ್‌ಕೆ ತಂಡವನ್ನು ಮಣಿಸಿತ್ತು. ಐಪಿಎಲ್ ಇತಿಹಾಸದ 2 ಯಶಸ್ವಿ ತಂಡಗಳೆದುರು ಗೆಲುವು ಸಾಧಿಸಿರುವ ವಿಶ್ವಾಸ ಉಭಯ ತಂಡಗಳಲ್ಲೂ ಇದೆ.
ರಾಹುಲ್ ಟೂರ್ನಿಯಲ್ಲಿ ಇದುವರೆಗೆ 2 ಶತಕ ಸಿಡಿಸಿ ಭರ್ಜರಿ ಫಾರ್ಮ್‌ನಲ್ಲಿದ್ದರೆ, ಮಯಾಂಕ್ ಅಸ್ಥಿರ ನಿರ್ವಹಣೆ ತೋರಿದ್ದಾರೆ. ರಾಹುಲ್ ತಮ್ಮ ಮಾಜಿ ತಂಡದ ವಿರುದ್ಧವೂ ಅದೇ ಲಯ ಮುಂದುವರಿಸುವ ತವಕದಲ್ಲಿದ್ದಾರೆ. ಟೂರ್ನಿಯ ಲೀಗ್ ಹಂತದಲ್ಲಿ ಇದು ಉಭಯ ತಂಡಗಳ ಏಕಮಾತ್ರ ಮುಖಾಮುಖಿ ಆಗಿರಲಿದೆ.
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟೀಮ್ ನ್ಯೂಸ್:
ಲಖನೌ ಸೂಪರ್‌ಜೈಂಟ್ಸ್: ಕನ್ನಡಿಗ ಮನೀಷ್ ಪಾಂಡೆ ಬ್ಯಾಟಿಂಗ್ ವಿಭಾಗದಲ್ಲಿ ತಂಡದ ಏಕೈಕ ವೀಕ್ ಲಿಂಕ್ ಆಗಿದ್ದು, ಅವರ ಬದಲಿಗೆ ಮನನ್ ವೊಹ್ರಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಆವೇಶ್ ಖಾನ್ ಮರಳಿದರೆ, ಮೊಹ್ಸಿನ್ ಖಾನ್ ಹೊರಗುಳಿಯಲಿದ್ದಾರೆ.
ಪಂಜಾಬ್ ಕಿಂಗ್ಸ್: ಕಳೆದ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡಿ ಯಶಸ್ಸು ಕಂಡಿದ್ದ ಪಂಜಾಬ್ ತಂಡದ ಸಂಯೋಜನೆ ಈ ಬಾರಿ ಬದಲಾಗುವ ಸಾಧ್ಯತೆಗಳಿಲ್ಲ. ಭಾನುಕ ರಾಜಪಕ್ಷ 3ನೇ ಕ್ರಮಾಂಕದ ಸ್ಥಾನ ಕಾಯ್ದುಕೊಳ್ಳಲಿದ್ದಾರೆ.