

ಧರ್ಮಶಾಲಾ: ಉತ್ತಮ ಲಯದಲ್ಲಿರುವ ಪಂಜಾಬ್ ಕಿಂಗ್ಸ್ ಮತ್ತು ಭರ್ಜರಿ ಆರಂಭದ ಬಳಿಕ ಲಯ ತಪ್ಪಿದಂತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಗುರುವಾರ ಮುಖಾಮುಖಿ ಆಗಲಿವೆ. ಧರ್ಮಶಾಲಾದ ಎಚ್ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಪ್ಲೇಆಫ್ ರೇಸ್ನಲ್ಲಿ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಆಪರೇಷನ್ ಸಿಂಧೂರ ಬಳಿಕ ಪಂದ್ಯ ನಿಗದಿಯಂತೆ ಆಯೋಜನೆಯಾಗುವ ಬಗ್ಗೆಯೂ ಅನುಮಾನ ಮೂಡಿದ್ದು, ಕೇಂದ್ರ ಸರ್ಕಾರದಿಂದ ಅನುಮತಿ ಲಭಿಸಿದರಷ್ಟೇ ಬಿಸಿಸಿಐ ಪಂದ್ಯವನ್ನು ನಡೆಸಲಿದೆ ಎನ್ನಲಾಗಿದೆ.
ಶ್ರೇಯಸ್ ಅಯ್ಯರ್ ಪಡೆ ಕೊನೇ 2 ಪಂದ್ಯಗಳಲ್ಲಿ ಸಿಎಸ್ಕೆ ಮತ್ತು ಲಖನೌ ಎದುರು ಗೆದ್ದ ವಿಶ್ವಾಸದಲ್ಲಿದೆ. ಟೂರ್ನಿಯಲ್ಲಿ ಇದುವರೆಗೆ 5 ಪಂದ್ಯಗಳಲ್ಲಿ 200 ಪ್ಲಸ್ ಮೊತ್ತ ಪೇರಿಸಿರುವ ಪಂಜಾಬ್ ತಂಡ, ಬೌಲಿಂಗ್ ವಿಭಾಗದಲ್ಲಿ ಮಾತ್ರ ಅಸ್ಥಿರ ನಿರ್ವಹಣೆ ತೋರಿದೆ. ಆದರೂ ಎಡಗೈ ವೇಗಿ ಅರ್ಷದೀಪ್ ಸಿಂಗ್, ಸ್ಪಿನ್ನರ್ ಯಜುವೇಂದ್ರ ಚಾಹಲ್ ತಂಡದ ಪ್ರಮುಖ ಬಲ ಎನಿಸಿದ್ದಾರೆ.
ಅಕ್ಷರ್ ಪಟೇಲ್ ಪಡೆ ಕಳೆದ 3 ಪಂದ್ಯಗಳಲ್ಲಿ ಗೆಲುವು ಕಂಡಿಲ್ಲ. ಅಲ್ಲದೆ ಕೊನೇ 5 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿದೆ. ಆರಂಭಿಕ 4 ಪಂದ್ಯ ಗೆದ್ದು ಬೀಗಿದ್ದ ಡೆಲ್ಲಿ ಈಗ ಪ್ಲೇಆ್ ಹಂತಕ್ಕೇರಲು ಪರದಾಡುತ್ತಿದೆ. ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಎದುರು 133 ರನ್ಗಳಿಗೆ ಕುಸಿದಿದ್ದ ಡೆಲ್ಲಿ ಮಳೆಯಿಂದಾಗಿ ಸೋಲಿನಿಂದ ಪಾರಾಗಿ 1 ಅಂಕದ ಸಮಾಧಾನ ಕಂಡಿತ್ತು. ತಂಡದ ಪ್ರಮುಖ ಬ್ಯಾಟರ್ಗಳು ಇತ್ತೀಚೆಗೆ ಲಯ ತಪ್ಪಿರುವುದು ಡೆಲ್ಲಿ ಪಾಲಿಗೆ ದೊಡ್ಡ ಹಿನ್ನಡೆ ಎನಿಸಿದೆ. ಜತೆಗೆ ಕಳೆದ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ಗೆ ಆರಂಭಿಕನಾಗಿ ಬಡ್ತಿ ನೀಡಿದ ಡೆಲ್ಲಿ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು. ಅಭಿಷೇಕ್ ಪೊರೆಲ್, ಕೆಎಲ್ ರಾಹುಲ್ ಕೂಡ ಆರಂಭಿಕ ಪಂದ್ಯಗಳ ನಿರ್ವಹಣೆ ಪುನರಾವರ್ತಿಸುವಲ್ಲಿ ವಿಲರಾಗುತ್ತಿದ್ದಾರೆ. ಧರ್ಮಶಾಲಾ ಮೈದಾನದ ಪಿಚ್ ಬ್ಯಾಟಿಂಗ್ ಸ್ನೇಹಿ ಆಗಿರುವುದರಿಂದ ಡೆಲ್ಲಿ ಬ್ಯಾಟರ್ಗಳಿಗೆ ಲಯಕ್ಕೆ ಮರಳಲು ಉತ್ತಮ ಅವಕಾಶವಿದೆ.
ಪ್ಲೇಆಫ್ ಲೆಕ್ಕಾಚಾರ...
ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 7 ಜಯ, 3 ಸೋಲು, 1 ರದ್ದು ಒಳಗೊಂಡಂತೆ 15 ಅಂಕ ಕಲೆಹಾಕಿರುವ ಪಂಜಾಬ್ ತಂಡ ಈ ಪಂದ್ಯ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಜತೆಗೆ ಪ್ಲೇಆಫ್ ಸ್ಥಾನವನ್ನೂ ಬಹುತೇಕ ಖಾತ್ರಿಪಡಿಸಿಕೊಳ್ಳಲಿದೆ. ಅಲ್ಲದೆ ಅಗ್ರ 2ರೊಳಗೆ ಸ್ಥಾನ ಸಂಪಾದಿಸುವ ಆಸೆಯನ್ನೂ ಜೀವಂತವಿಡಲಿದೆ. ಪ್ಲೇಆಫ್ಗೇರಲು ಪಂಜಾಬ್ಗೆ ಉಳಿದ 3 ಪಂದ್ಯಗಳಲ್ಲಿ 1 ಅಥವಾ 2 ಗೆಲುವಿನ ಅಗತ್ಯವಿದೆ. ಒಂದು ಪಂದ್ಯವನ್ನಷ್ಟೇ ಗೆದ್ದರೆ ಇತರ ಫಲಿತಾಂಶಗಳನ್ನೂ ಆಧರಿಸಬೇಕಾಗುತ್ತದೆ. ಮತ್ತೊಂದೆಡೆ ಡೆಲ್ಲಿ ತಂಡ 11 ಪಂದ್ಯಗಳಲ್ಲಿ 6 ಜಯ, 4 ಸೋಲು, 1 ರದ್ದು ಒಳಗೊಂಡಂತೆ 13 ಅಂಕ ಕಲೆಹಾಕಿದ್ದು, ಪ್ಲೇಆಫ್ಗೇರಲು ಉಳಿದ 3ರಲ್ಲಿ 2ರಲ್ಲಾದರೂ ಗೆಲ್ಲಬೇಕಿದೆ. ಈ ಪಂದ್ಯ ಸೋತರೆ ಕೊನೇ 2 ಪಂದ್ಯ ಡೆಲ್ಲಿ ಪಾಲಿಗೆ ಮಾಡು ಇಲ್ಲವೆ ಮಡಿ ಎನಿಸಲಿದೆ.
ಮುಖಾಮುಖಿ: 33
ಪಂಜಾಬ್: 17
ಡೆಲ್ಲಿ: 16
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕರಷ್ಟೇ ಪಂದ್ಯ
ಪಂಜಾಬ್-ಡೆಲ್ಲಿ ನಡುವಿನ ಧರ್ಮಶಾಲಾದ ಪಂದ್ಯಕ್ಕೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕರಷ್ಟೇ ಬಿಸಿಸಿಐ ಪಂದ್ಯವನ್ನು ನಿಗದಿಯಂತೆ ಆಯೋಜಿಸಲಿದೆ. ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಧರ್ಮಶಾಲಾ ವಿಮಾನ ನಿಲ್ದಾಣ ತಾತ್ಕಾಲಿಕವಾಗಿ ಬಂದ್ ಆಗಿದೆ. ಇದಕ್ಕೆ ಮುನ್ನವೇ ಡೆಲ್ಲಿ ತಂಡ ಧರ್ಮಶಾಲಾ ತಲುಪಿತ್ತು. ಆದರೆ ಪಂದ್ಯಕ್ಕೆ ಸಂಜೆ ವೇಳೆ ಹೊನಲು ಬೆಳಕಿನ ಬಳಕೆ ಮಾಡುವುದು ಭದ್ರತಾ ಸಮಸ್ಯೆ ತಂದೊಡ್ಡುವ ಭೀತಿಯನ್ನೂ ಸೃಷ್ಟಿಸಿದೆ. ಅಲ್ಲದೆ ಈಗಿನ ಪರಿಸ್ಥಿತಿಯಲ್ಲಿ, ಗಡಿ ಪ್ರದೇಶದ ಸಮೀಪದಲ್ಲಿರುವ ಧರ್ಮಶಾಲಾದಲ್ಲಿ ಪಂದ್ಯ ನಡೆಸಲು ಬಿಸಿಸಿಐ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವುದು ಅಗತ್ಯವೆನಿಸಿದೆ. ಪರಿಸ್ಥಿತಿಯಲ್ಲಿ ಅವಲೋಕಿಸಿ ಮತ್ತು ಕೇಂದ್ರ ಸರ್ಕಾರದ ಸೂಚನೆ ಆಧರಿಸಿ ಬಿಸಿಸಿಐ ಪಂದ್ಯವನ್ನು ನಡೆಸಲಿದೆ ಎನ್ನಲಾಗಿದೆ.
"ಪಂದ್ಯ ರದ್ದುಗೊಳಿಸುವ ಬಗ್ಗೆ ನಮಗೆ ಬಿಸಿಸಿಐ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಇದುವರೆಗೆ ಯಾವುದೇ ಲಿಖಿತ ಸೂಚನೆ ಬಂದಿಲ್ಲ. ಯಾವುದೇ ಅಧಿಕೃತ ನಿರ್ದೇಶನದ ಹೊರತಾಗಿ, ನಾವು ನಿಗದಿಯಂತೆ ಪಂದ್ಯ ಆಯೋಜಿಸಲಿದ್ದೇವೆ' ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ತಿಳಿಸಿದೆ.