ಪುಣೇರಿ ಪಲ್ಟಾನ್​ಗೆ ಪ್ರೊ ಕಬಡ್ಡಿ ಪ್ರಶಸ್ತಿ; ಕನ್ನಡಿಗ ಬಿಸಿ ರಮೇಶ್​ ಮಾರ್ಗದರ್ಶನದ ತಂಡಕ್ಕೆ ಚೊಚ್ಚಲ ಕಿರೀಟ

pro web
Published on

ಹೈದರಾಬಾದ್​: ಕನ್ನಡಿಗ ಬಿಸಿ ರಮೇಶ್​ ಮಾರ್ಗದರ್ಶನದ ಪುಣೇರಿ ಪಲ್ಟಾನ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಚಾಂಪಿಯನ್​ ಪಟ್ಟವೇರಿದೆ. ಪುಣೇರಿ ತಂಡ ಶುಕ್ರವಾರ ನಡೆದ ಫೈನಲ್​ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್​ ವಿರುದ್ಧ 28&25 ಅಂಕಗಳಿಂದ ರೋಚಕ ಗೆಲುವು ದಾಖಲಿಸುವ ಮೂಲಕ ಮೊಟ್ಟಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿತು. ಈ ಮೂಲಕ ಕಳೆದ ವರ್ಷದ ಫೈನಲ್​ನಲ್ಲಿ ಅನುಭವಿಸಿದ್ದ ನಿರಾಸೆಯನ್ನು ಮರೆತರೆ, ಮೊದಲ ಬಾರಿಗೆ ಫೈನಲ್​ನಲ್ಲಿ ಆಡಿದ ಹರಿಯಾಣ ಸ್ಟೀಲರ್ಸ್​ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿತು.

ಗಚ್ಚಿಬೌಲಿಯ ಬಾಲಯೋಗಿ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಪುಣೇರಿ ತಂಡ ಮೊದಲಾರ್ಧದಲ್ಲಿ 13&10ರಿಂದ ಅಲ್ಪ ಮುನ್ನಡೆ ಸಾಧಿಸಿತು. ದ್ವೀತಿಯಾರ್ಧದಲ್ಲಿ ಹರಿಯಾಣ ಸ್ಟೀಲರ್ಸ್​ ತಂಡ ನೀಡಿದ ಪ್ರಬಲ ಪೈಪೋಟಿಯ ನಡುವೆಯೂ ಪುಣೇರಿ ತಂಡ ಕೊನೆಯವರೆಗೂ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಪುಣೇರಿ ತಂಡ ಟೂರ್ನಿಯ ಲೀಗ್​ ಹಂತದಲ್ಲೂ ಆಡಿದ 22 ಪಂದ್ಯಗಳಲ್ಲಿ 17ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತ್ತು.

ಫೈನಲ್​ನಲ್ಲಿ ಪುಣೇರಿ ಪರ ರೈಡರ್​ ಪಂಕಜ್​ ಮೋಹಿತೆ ಗರಿಷ್ಠ 9 ಅಂಕ ಕಲೆಹಾಕಿದರೆ, ಮೋಹಿತ್​ ಗೋಯತ್​ (5), ನಾಯಕ ಅಸ್ಲಾಂ ಮುಸ್ತಾ (4) ಮತ್ತು ಗೌರವ್​ ಖಾತ್ರಿ (4) ಉತ್ತಮ ಬೆಂಬಲ ಒದಗಿಸಿದರು. ಹರಿಯಾಣ ಪರ ಶಿವಂ ಪತರೆ (6) ಮತ್ತು ಸಿದ್ಧಾರ್ಥ್​ ದೇಸಾಯಿ (4) ತೋರಿದ ಹೋರಾಟ ವ್ಯರ್ಥವಾಯಿತು.

ಚಾಂಪಿಯನ್​ ಪುಣೇರಿ ಪಲ್ಟಾನ್​ 3 ಕೋಟಿ ರೂ. ಬಹುಮಾನ ಗೆದ್ದುಕೊಂಡರೆ, ರನ್ನರ್​ಅಪ್​ ಹರಿಯಾಣ ಸ್ಟೀಲರ್ಸ್​ 1.8 ಕೋಟಿ ರೂ. ಗಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net