ಯುಎಇಯಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಆಯೋಜಿಸುವ ಆಸೆಗೆ ಬಿತ್ತು ಕಲ್ಲು!

pakistan-super-league-psl-2021
Published on

ಕರಾಚಿ: ಐಪಿಎಲ್ ಟೂರ್ನಿಗೆ ಮುನ್ನ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟಿ20 ಟೂರ್ನಿ ಕೂಡ ಕರೊನಾ ವೈರಸ್ ಹಾವಳಿಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಇದೀಗ ಟೂರ್ನಿಯನ್ನು ಮುಂದಿನ ಜೂನ್‌ನಲ್ಲಿ ಯುಎಇಯಲ್ಲಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಯೋಜನೆ ಸಿದ್ಧಪಡಿಸುತ್ತಿತ್ತು. ಆದರೆ ಇದು ಕಾರ್ಯರೂಪಕ್ಕೆ ಬರುವ ಮೊದಲೇ ಇದೀಗ ಅರಬ್ ರಾಷ್ಟ್ರದಲ್ಲಿ ಟೂರ್ನಿ ಆಯೋಜಿಸಲು ದೊಡ್ಡ ತಡೆಯೊಂದು ಎದುರಾಗಿದೆ.

ಯುಎಇ ಸರ್ಕಾರ ಕರೊನಾ ಭೀತಿಯಿಂದಾಗಿ ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶದ ವಿಮಾನಗಳನ್ನು ನಿರ್ಬಂಧಿಸಿದೆ. ಬುಧವಾರದಿಂದಲೇ ಇದು ಜಾರಿಗೆ ಬರಲಿದೆ. ಇದರಿಂದಾಗಿ ಜೂನ್ 1ರಿಂದ ದುಬೈ ಮತ್ತು ಅಬುಧಾಬಿಯಲ್ಲಿ ಪಿಎಸ್‌ಎಲ್‌ನ ಉಳಿದ 20 ಪಂದ್ಯಗಳನ್ನು ಆಯೋಜಿಸುವ ಪಿಸಿಬಿ ಯೋಜನೆಗೆ ಕಲ್ಲು ಬಿದ್ದಂತಾಗಿದೆ.

ಯುಎಇ ಕ್ರಿಕೆಟ್ ಮಂಡಳಿಯ ಜತೆಗೂಡಿ ಯುಎಇ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಪಿಎಸ್‌ಎಲ್‌ಗೆ ಅನುಮತಿ ಪಡೆದುಕೊಳ್ಳಲು ಪಿಸಿಬಿ ಮುಂದಾಗಿತ್ತು. ಇದೀಗ ಅದಕ್ಕೆ ಮುನ್ನವೇ ಯುಎಇ ಸರ್ಕಾರ, ಪಾಕಿಸ್ತಾನದ ವಿಮಾನಗಳಿಗೆ ನಿರ್ಬಂಧ ಹೇರಿದೆ. ಇದರಿಂದ ಇನ್ನು ಕರಾಚಿಯನ್ನಷ್ಟೇ ಪಂದ್ಯಗಳನ್ನು ಆಯೋಜಿಸುವ ಆಯ್ಕೆ ಪಿಸಿಬಿ ಮುಂದಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ಪಿಎಸ್‌ಎಲ್ ಪಂದ್ಯಗಳು ನಡೆಯುತ್ತಿದ್ದಾಗಲೇ ಟೂರ್ನಿಯ ಬಯೋಬಬಲ್‌ನಲ್ಲಿ ಹಲವಾರು ಕರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದವು. ಇದರಿಂದಾಗಿ ಟೂರ್ನಿ ದಿಢೀರ್ ಸ್ಥಗಿತಗೊಂಡಿತ್ತು. ಯುಎಇಯಲ್ಲಿ ಸಾಧ್ಯವಾಗದಿದ್ದರೆ, ಶ್ರೀಲಂಕಾದಲ್ಲಿ ಟೂರ್ನಿ ನಡೆಸಲು ಪಿಸಿಬಿ ಪರಿಶೀಲಿಸಿತ್ತು. ಆದರೆ ಹಲವಾರು ಲಾಜಿಸ್ಟಿಕ್ಸ್ ಸಮಸ್ಯೆ ಎದುರಾಗುವುದರಿಂದ ಶ್ರೀಲಂಕಾದಲ್ಲಿ ಟೂರ್ನಿ ಆಯೋಜನೆ ಅಸಾಧ್ಯವೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net