ಧೋನಿ ಸಾಧನೆ ಸರಿಗಟ್ಟಿದ ಪಾಕ್ ನಾಯಕ ಬಾಬರ್ ಅಜಮ್

babar web
Published on

ಹರಾರೆ: ವೇಗಿ ಶಹೀನ್ ಷಾ ಅಫ್ರಿದಿ (52ಕ್ಕೆ 5) ಮತ್ತು ಎಡಗೈ ಸ್ಪಿನ್ನರ್ ನೌಮಾನ್ ಅಲಿ (86ಕ್ಕೆ 5) ಮಾರಕ ದಾಳಿಗೆ ನಲುಗಿದ ಆತಿಥೇಯ ಜಿಂಬಾಬ್ವೆ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 147 ರನ್‌ಗಳಿಂದ ಸೋಲು ಕಂಡಿದೆ. ಈ ಮೂಲಕ ಪಾಕ್ ತಂಡ 2-0ಯಿಂದ ಸರಣಿ ಜಯಿಸಿದೆ. ಇದರೊಂದಿಗೆ ಪಾಕ್ ನಾಯಕ ಬಾಬರ್ ಅಜಮ್, ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ಸಾಧನೆಯೊಂದನ್ನು ಸರಿಗಟ್ಟಿದ್ದಾರೆ.

ಬಾಬರ್ ಅಜಮ್ ಈಗ ಪಾಕಿಸ್ತಾನ ತಂಡದ ನಾಯಕರಾಗಿ ಆಡಿದ ಮೊದಲ ನಾಲ್ಕೂ ಟೆಸ್ಟ್ ಪಂದ್ಯಗಳಲ್ಲಿ ಜಯಿಸಿದ ದಾಖಲೆ ಬರೆದಿದ್ದಾರೆ. 2008ರಲ್ಲಿ ಎಂಎಸ್ ಧೋನಿ ಕೂಡ ನಾಯಕರಾಗಿ ಭಾರತ ತಂಡವನ್ನು ಮುನ್ನಡೆಸಿದ ಮೊದಲ ನಾಲ್ಕೂ ಟೆಸ್ಟ್‌ಗಳಲ್ಲಿ ಗೆದ್ದ ಸಾಧನೆ ಮಾಡಿದ್ದರು. ಬಾಬರ್ ಅಜಮ್ ನಾಯಕರಾಗಿ ಮೊದಲ ನಾಲ್ಕೂ ಟೆಸ್ಟ್ ಗೆದ್ದ 8ನೇ ಆಟಗಾರರಾಗಿದ್ದಾರೆ. ಪಾಕಿಸ್ತಾನದ ಹಿಂದಿನ ಯಾವ ನಾಯಕರೂ ಮೊದಲ ಎರಡಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ಸತತ ಗೆಲುವು ಕಂಡಿರಲಿಲ್ಲ. ಇಂಗ್ಲೆಂಡ್‌ನ ಪೆರ್ಸಿ ಚಾಪ್‌ಮನ್ (1926-30) ನಾಯಕರಾಗಿ ಆಡಿದ ಮೊದಲ 9 ಟೆಸ್ಟ್‌ಗಳಲ್ಲೂ ಗೆದ್ದಿರುವುದು ವಿಶ್ವದಾಖಲೆಯಾಗಿದೆ.

ಪಾಕಿಸ್ತಾನದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 132 ರನ್‌ಗೆ ಕುಸಿದು ಫಾಲೋಆನ್‌ಗೆ ಸಿಲುಕಿದ್ದ ಜಿಂಬಾಬ್ವೆ ತಂಡ, 4ನೇ ದಿನದಾಟದಲ್ಲಿ 231 ರನ್‌ಗೆ 2ನೇ ಇನಿಂಗ್ಸ್ ಮುಗಿಸಿತು. 3ನೇ ದಿನದಂತ್ಯಕ್ಕೆ 9 ವಿಕೆಟ್‌ಗೆ 220 ರನ್ ಗಳಿಸಿದ್ದ ಜಿಂಬಾಬ್ವೆ ತಂಡ, ಸೋಮವಾರ 5 ಓವರ್‌ಗಳಲ್ಲೇ ಸೋಲೊಪ್ಪಿಕೊಂಡಿತು. ಸರಣಿಯ ಮೊದಲ ಟೆಸ್ಟ್‌ನಲ್ಲೂ ಪಾಕ್ ಇನಿಂಗ್ಸ್ ಮತ್ತು 116 ರನ್‌ಗಳಿಂದ ಜಯಿಸಿತ್ತು.

ಪಾಕಿಸ್ತಾನ: 8 ವಿಕೆಟ್‌ಗೆ 510 ಡಿಕ್ಲೇರ್ (ಅಬಿದ್ ಅಲಿ 215, ಅಜರ್ ಅಲಿ 126, ಮುಜರಬನಿ 82ಕ್ಕೆ 3), ಜಿಂಬಾಬ್ವೆ: 132 ಮತ್ತು 231 (ಚಕಬ್ವ 80, ಬ್ರೆಂಡನ್ ಟೇಲರ್ 49, ಶಹೀನ್ ಷಾ ಅಫ್ರಿದಿ 52ಕ್ಕೆ 5, ನೌಮಾನ್ ಅಲಿ 86ಕ್ಕೆ 5). ಪಂದ್ಯಶ್ರೇಷ್ಠ: ಅಬಿದ್ ಅಲಿ, ಸರಣಿಶ್ರೇಷ್ಠ: ಹಸನ್ ಅಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net