ಮುಂದಿನ ಬಾರಿ ಶಾಂಪೂ, ಶೇವಿಂಗ್​ ಕ್ರೀಮ್​ ಕೊಟ್ಬಿಡಿ... IPL ಮುಂದೆ PSL ಏನೇನೂ ಅಲ್ಲ, ಇದೇ ಸಾಕ್ಷಿ!

PSL
Published on

PSL: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುವ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್)ಗೆ ಪೈಪೋಟಿ ನೀಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಅನ್ನು ಆಯೋಜಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆ ದೇಶದ ಮಾಜಿ ಕ್ರಿಕೆಟಿಗರು ಐಪಿಎಲ್​ಗಿಂತ ನಮ್ಮ ಪಿಎಸ್ಎಲ್ ಉತ್ತಮ ಲೀಗ್ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವ ಮಾತ್ರ ವಿಭಿನ್ನವಾಗಿದೆ.

ಈ ಬಾರಿಯ ಪಿಎಸ್​ಎಲ್​ ಸೀಸನ್ ಏಪ್ರಿಲ್ 11 ರಂದು ಪ್ರಾರಂಭವಾಯಿತು. ಐಪಿಎಲ್​ಗೆ ಠಕ್ಕರ್​ ಕೊಡಬೇಕಂತಲೇ ಈ ಬಾರಿ ಒಂದೇ ಸಮಯದಲ್ಲಿ ವೇಳಾಪಟ್ಟಿಯನ್ನು ಇಟ್ಟುಕೊಳ್ಳಲಾಗಿದೆ. ಆದರೆ, ಪಿಎಸ್​ಎಲ್, ಐಪಿಎಲ್​ ಮುಂದೆ ಒಂದು ಧೂಳಿನ ಕಣ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಏಕೆಂದರೆ, ಪಿಎಸ್​ಎಲ್​ಗೆ ಪ್ರೇಕ್ಷಕರ ಬೆಂಬಲ ತುಂಬಾ ಕಡಿಮೆ.

ಇನ್ನು ಪಿಎಸ್​ಎಲ್​ನಲ್ಲಿ ಶತಕ ಗಳಿಸಿದ ಆಟಗಾರನಿಗೆ ತಂಡದ ಮಾಲೀಕರು ನೀಡಿದ ಉಡುಗೊರೆ ಪ್ರಸ್ತುತ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಯಾರಾದರೂ ಅಂತಹ ಉಡುಗೊರೆಯನ್ನು ನೀಡುತ್ತಾರೆಯೇ? ನಮ್ಮಲ್ಲಿ ಗಲ್ಲಿ ಕ್ರಿಕೆಟ್‌ನಲ್ಲಿ ಕೂಡ ಇದಕ್ಕಿಂತ ಉತ್ತಮ ಬಹುಮಾನಗಳನ್ನು ನೀಡುತ್ತಾರೆ ಎಂಬ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ.

ಅಂದಹಾಗೆ, ಏಪ್ರಿಲ್ 12ರಂದು ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವೆ ಪಿಎಸ್ಎಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ಮೊಹಮ್ಮದ್ ರಿಜ್ವಾನ್ ಶತಕ (63 ಎಸೆತಗಳಲ್ಲಿ 105 ರನ್) ಗಳಿಸಿದರು. ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಸುಲ್ತಾನ್ಸ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 234 ರನ್ ಗಳಿಸಿತು.

ನಂತರ, ಗುರಿ ಬೆನ್ನತ್ತಿದ ಕರಾಚಿ ಕಿಂಗ್ಸ್​ ಪರ ಜೇಮ್ಸ್ ವಿನ್ಸ್ (43 ಎಸೆತಗಳಲ್ಲಿ 101 ರನ್) ಶತಕ ಗಳಿಸಿದರು ಮತ್ತು ಖುಷ್ದಿಲ್ (37 ಎಸೆತಗಳಲ್ಲಿ 60 ರನ್) ಮಿಂಚಿದರು. ಕರಾಚಿ ಕಿಂಗ್ಸ್ 19.2 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಇದರೊಂದಿಗೆ, ಕರಾಚಿ ಕಿಂಗ್ಸ್ 4 ವಿಕೆಟ್‌ಗಳಿಂದ ಗೆದ್ದಿತು. ಕರಾಚಿ ಕಿಂಗ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಜೇಮ್ಸ್ ವಿನ್ಸ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ವಿನ್ಸ್​ ಅವರಿಗೆ ಡ್ರೆಸ್ಸಿಂಗ್ ರೂಮ್​ನಲ್ಲಿ ಮತ್ತೊಂದು ಪ್ರಶಸ್ತಿಯನ್ನು ಸಹ ನೀಡಲಾಯಿತು. 'ಪಂದ್ಯದ ವಿಶ್ವಾಸಾರ್ಹ ಆಟಗಾರ' ಎಂಬ ಉಡುಗೊರೆಯನ್ನು ನೀಡಲಾಯಿತು. ಕರಾಚಿ ಕಿಂಗ್ಸ್ ಮಾಲೀಕತ್ವವು ಅವರಿಗೆ ಹೇರ್ ಡ್ರೈಯರ್ ಅನ್ನು ಉಡುಗೊರೆಯಾಗಿ ನೀಡಿತು ಎಂಬುದು ಗಮನಾರ್ಹ. ಇದಲ್ಲದೆ, ಕರಾಚಿ ಕಿಂಗ್ಸ್ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರೇನಾದರೂ ಉತ್ತಮ ಪ್ರದರ್ಶನ ನೀಡಿದರೆ, ಶಾಂಪೂ ಮತ್ತು ಶೇವಿಂಗ್ ಕ್ರೀಮ್‌ಗಳನ್ನು ನೀಡಿ ಎಂದು ಕೆಲವರು ಹಾಸ್ಯಚಟಾಕಿ ಹಾರಿಸಿದ್ದಾರೆ. ಐಪಿಎಲ್​ ಮುಂದೆ ಪಿಎಸ್​ಎಲ್​ ಏನೇನೂ ಅಲ್ಲ ಎಂದು ಅನೇಕರು ಕಾಮೆಂಟ್​ ಮಾಡುತ್ತಿದ್ದಾರೆ. ನಮ್ಮ ಐಪಿಎಲ್​ ಮುಂದೆ ಪಿಎಸ್​ಎಲ್​ ಹೋಲಿಕೆ ಮಾಡುವುದನ್ನು ನಿಲ್ಲಿಸಿ. ಇಲ್ಲವಾದಲ್ಲಿ ನಗೆಪಾಟಲಿಗೀಡಾಗುತ್ತೀರಾ ಎಂದು ಕಾಮೆಂಟ್​ ಮೂಲಕ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net