ಇಂದಿನಿಂದ ಪ್ರೊ ಕಬಡ್ಡಿ ಲೀಗ್, ಬೆಂಗಳೂರು ಬುಲ್ಸ್-ಯು ಮುಂಬಾ ಮೊದಲ ಫೈಟ್

Pro Kabaddi League Season 8_web
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಪ್ಪಟ ಗ್ರಾಮೀಣ ಕ್ರೀಡೆ ಕಬಡ್ಡಿ ಆಟವನ್ನು ಸವಿಯುವ ಅವಕಾಶ ಕ್ರೀಡಾಭಿಮಾನಿಗಳಿಗೆ ಮತ್ತೆ ಒಲಿದುಬಂದಿದೆ. ಕರೊನಾ ಕಾಲದಲ್ಲಿ ಮೊದಲ ಪ್ರೊ ಕಬಡ್ಡಿ ಲೀಗ್ ಹಬ್ಬಕ್ಕೆ ವೇದಿಕೆ ಸಜ್ಜಾಗಿದ್ದು, ಮಾಜಿ ಚಾಂಪಿಯನ್‌ಗಳಾದ ಆತಿಥೇಯ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ಮುಖಾಮುಖಿಯೊಂದಿಗೆ 8ನೇ ಆವೃತ್ತಿಯ ಟೂರ್ನಿಗೆ ಬುಧವಾರ ಚಾಲನೆ ಸಿಗಲಿದೆ. ನವವಾಸ್ತವಕ್ಕೆ ಒಗ್ಗಿಕೊಂಡಿರುವ ಟೂರ್ನಿ ಕೊಂಚ ಬದಲಾವಣೆಗಳನ್ನು ಕಂಡಿದ್ದು, ಐಪಿಎಲ್ ಮಾದರಿಯಂತೆ ಬಯೋಬಬಲ್ ವ್ಯಾಪ್ತಿಯಲ್ಲೇ ಲೀಗ್ ಆಯೋಜಿಸಲಾಗುತ್ತಿದೆ. ಉದ್ಯಾನನಗರಿಯಲ್ಲೇ ಎಲ್ಲ ಪಂದ್ಯಗಳು ನಿಗದಿಯಾಗಿವೆ. 7ನೇ ಆವೃತ್ತಿಯ ಬಳಿಕ ತಂಡಗಳ ಬಲಾಬಲಗಳು ಸಾಕಷ್ಟು ಬದಲಾಗಿದ್ದು, ಕಳೆದ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚಿನ ಆಟಗಾರರ ತಂಡಗಳು ಬದಲಾವಣೆ ಕಂಡಿದೆ. ಇದರಿಂದ ಟೂರ್ನಿ ಸಾಕಷ್ಟು ಕುತೂಹಲ ಕೆರಳಿಸಿದೆ. ಮೊದಲ ದಿನದ 2ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್-ತಮಿಳ್ ತಲೈವಾಸ್ ನಡುವೆ ‘ಸದರ್ನ್ ಡರ್ಬಿ’ ಏರ್ಪಡಲಿದೆ. 3ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ಮತ್ತು ಯುಪಿ ಯೋಧಾ ಮುಖಾಮುಖಿ ಆಗಲಿವೆ.

ಜ.20ರವರೆಗೆ ಮೊದಲ ಚರಣ
ಹಿಂದಿನ ಆವೃತ್ತಿಗಳಲ್ಲಿ ಪ್ರತಿ ತಂಡಗಳ ತವರಿನಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು. ಕೋವಿಡ್ ಕಾರಣದಿಂದಾಗಿ ಈ ಬಾರಿ ಒಂದೇ ತಾಣದಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ. ಸದ್ಯ ಜನವರಿ 20ರವರೆಗಿನ 66 ಪಂದ್ಯಗಳ ವೇಳಾಪಟ್ಟಿಯನ್ನಷ್ಟೇ ಪ್ರಕಟಿಸಲಾಗಿದೆ. ಮೊದಲ ಚರಣ ಮುಗಿದ ಬೆನ್ನಲ್ಲೇ 2ನೇ ಚರಣ ಶುರುವಾಗುವುದೇ ಮತ್ತು 2ನೇ ಚರಣವೂ ಬೆಂಗಳೂರಿನಲ್ಲೇ ನಡೆಯುವುದೇ ಎಂಬುದನ್ನು ಸಂಘಟಕರು ಸ್ಪಷ್ಟಪಡಿಸಿಲ್ಲ.

ಟೂರ್ನಿ ಸ್ವರೂಪ
ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ 12 ತಂಡಗಳು ಡಬಲ್ ರೌಂಡ್ ರಾಬಿನ್ ಮಾದರಿಯ ಲೀಗ್ ಹಂತದಲ್ಲಿ ಒಟ್ಟು 22 ಪಂದ್ಯಗಳನ್ನು ಆಡಲಿವೆ. ಬಳಿಕ ಅಗ್ರ 6 ತಂಡಗಳು ಪ್ಲೇಆ್ಗೇರಲಿವೆ. ಈ ಪೈಕಿ ಅಗ್ರ 2 ತಂಡಗಳು ಕ್ವಾಲಿೈಯರ್-1ರಲ್ಲಿ ಆಡಲಿದ್ದರೆ, ಉಳಿದ 4 ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಟೂರ್ನಿಯಲ್ಲಿ ಒಟ್ಟು 137 ಪಂದ್ಯಗಳು ನಡೆಯಲಿವೆ.

ಪ್ರದೀಪ್ ನರ್ವಾಲ್ ದುಬಾರಿ ಆಟಗಾರ
ಪಟನಾ ಪೈರೇಟ್ಸ್ ತಂಡದ ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್, ಕಳೆದ ಆಟಗಾರರ ಹರಾಜಿನಲ್ಲಿ 1.65 ಕೋಟಿ ರೂಪಾಯಿಗೆ ಯುಪಿ ಯೋಧಾ ತಂಡಕ್ಕೆ ಸೇರ್ಪಡೆಗೊಳ್ಳುವ ಮೂಲಕ ದುಬಾರಿ ಆಟಗಾರ ಎನಿಸಿದ್ದಾರೆ. ಸಿದ್ದಾರ್ಥ್ ದೇಸಾಯಿ 1.30 ಕೋಟಿ ರೂಪಾಯಿಗೆ ತೆಲುಗು ಟೈಟಾನ್ಸ್‌ಗೆ ಸೇಲಾಗುವ ಮೂಲಕ ಎರಡನೇ ದುಬಾರಿ ಆಟಗಾರನಾಗಿದ್ದಾರೆ. ಒಟ್ಟಾರೆ ಈ ಬಾರಿ ಆಟಗಾರರ ಹರಾಜಿನಲ್ಲಿ 48.22 ಕೋಟಿ ರೂ. ವಹಿವಾಟು ನಡೆದಿದ್ದು, 190 ಆಟಗಾರರು ಕಣದಲ್ಲಿದ್ದಾರೆ.

ಚಾಂಪಿಯನ್ಸ್
ವರ್ಷ: ಚಾಂಪಿಯನ್
2014: ಜೈಪುರ ಪಿಂಕ್‌ಪ್ಯಾಂಥರ್ಸ್‌
2015: ಯು ಮುಂಬಾ
2016: ಪಟನಾ ಪೈರೇಟ್ಸ್
2016: ಪಟನಾ ಪೈರೇಟ್ಸ್
2017: ಪಟನಾ ಪೈರೇಟ್ಸ್
2018: ಬೆಂಗಳೂರು ಬುಲ್ಸ್
2019: ಬೆಂಗಾಲ್ ವಾರಿಯರ್ಸ್‌

ಸುರಕ್ಷಿತ ಬಯೋ-ಬಬಲ್
ಟೂರ್ನಿಗೆ ಸುರಕ್ಷಿತ ಬಯೋ-ಬಬಲ್ ನಿರ್ಮಿಸುವ ಸಲುವಾಗಿ ಉದ್ಯಾನನಗರಿಯ ಕಂಠೀರವ ಒಳಾಂಗಣ ಕ್ರೀಡಾಂಗಣಕ್ಕೆ ಬದಲಾಗಿ ವೈಲ್ಡ್‌ಫೀಲ್ಡ್‌ನ ಶೆರಾಟನ್ ಗ್ರಾೃಂಡ್ ಖಾಸಗಿ ಹೋಟೆಲ್ ಆವರಣದಲ್ಲಿ ಪಂದ್ಯಗಳು ನಡೆಯಲಿವೆ. ಎಲ್ಲ 12 ತಂಡಗಳ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಅದೇ ತಾಣದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಮತ್ತು ಅಲ್ಲೇ ಆಡಲಿದ್ದಾರೆ. ಇದು ಆಟಗಾರರ ಸುರಕ್ಷತೆಗೆ ನೆರವಾಗಲಿದೆ ಎಂದು ಸಂಘಟಕ ಮಾಷಲ್ ಸ್ಪೋರ್ಟ್ಸ್ ಸಂಸ್ಥೆ ತಿಳಿಸಿದೆ.

ಪ್ರೇಕ್ಷಕರಿಲ್ಲ
ಕರೊನಾ ಭೀತಿಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಟೂರ್ನಿಯ ಮೊದಲ ಚರಣದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗಿಲ್ಲ. ಕಬಡ್ಡಿ ಪ್ರೇಮಿಗಳು ಸ್ಟಾರ್ ಸ್ಪೋರ್ಟ್ಸ್, ಸುವರ್ಣ ಪ್ಲಸ್ ಚಾನಲ್ ಮತ್ತು ಹಾಟ್‌ಸ್ಟಾರ್‌ನಲ್ಲಿ ಮಾತ್ರ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಇಂದಿನ ಪಂದ್ಯಗಳು
*ಬೆಂಗಳೂರು ಬುಲ್ಸ್-ಯು ಮುಂಬಾ
ಆರಂಭ: ರಾತ್ರಿ 7.30
*ತೆಲುಗು ಟೈಟಾನ್ಸ್-ತಮಿಳ್ ತಲೈವಾಸ್
ಆರಂಭ: ರಾತ್ರಿ 8.30
*ಯುಪಿ ಯೋಧಾ-ಬೆಂಗಾಲ್ ವಾರಿಯರ್ಸ್‌
ಆರಂಭ: ರಾತ್ರಿ 9.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಸುವರ್ಣ ಪ್ಲಸ್​ (ಕನ್ನಡ)

*20: ಪ್ರೊ ಕಬಡ್ಡಿ ಲೀಗ್ ಟೂರ್ನಿ 20 ತಿಂಗಳ ಅಂತರದ ಬಳಿಕ ನಡೆಯಲಿದೆ. 2019ರ ಅಕ್ಟೋಬರ್‌ನಲ್ಲಿ ಟೂರ್ನಿಯ 7ನೇ ಆವೃತ್ತಿ ಮುಕ್ತಾಯಗೊಂಡಿತ್ತು. ಕೋವಿಡ್ ಮಹಾಮಾರಿಯಿಂದಾಗಿ ಕಳೆದ ವರ್ಷದ ಟೂರ್ನಿ ರದ್ದುಗೊಂಡಿತ್ತು.

*1: ಪ್ರದೀಪ್ ನರ್ವಾಲ್ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಗರಿಷ್ಠ ಅಂಕ ಕಲೆಹಾಕಿದ ಆಟಗಾರರೆನಿಸಿದ್ದಾರೆ. ಅವರು ಇದುವರೆಗೆ ಆಡಿರುವ 107 ಪಂದ್ಯಗಳಿಂದ 1,169 ಅಂಕ ಕಲೆಹಾಕಿದ್ದಾರೆ. ರಾಹುಲ್ ಚೌಧರಿ (122 ಪಂದ್ಯ, 1014 ಅಂಕ) ಎರಡನೇ ಸ್ಥಾನದಲ್ಲಿದ್ದಾರೆ.

ಈ ಬಾರಿ ಟ್ರಿಪಲ್ ಹೆಡರ್ಸ್‌
ಹಿಂದಿನ ಪ್ರೊ ಕಬಡ್ಡಿ ಲೀಗ್‌ಗಳಲ್ಲಿ ಪ್ರತಿದಿನ ಗರಿಷ್ಠ 2 ಪಂದ್ಯಗಳು ನಡೆಯುತ್ತಿದ್ದರೆ ಈ ಬಾರಿ ಟ್ರಿಪಲ್-ಹೆಡರ್ಸ್‌ ಆರಂಭಿಸಲಾಗಿದೆ. ಅಂದರೆ ಕೆಲ ದಿನಗಳಲ್ಲಿ ಗರಿಷ್ಠ 3 ಪಂದ್ಯಗಳು ನಡೆಯಲಿವೆ. ಟೂರ್ನಿಯ ಮೊದಲ 4 ದಿನಗಳಲ್ಲಿ ಟ್ರಿಪಲ್-ಹೆಡರ್ಸ್‌ ನಡೆಯಲಿವೆ. ನಂತರದಲ್ಲಿ ಪ್ರತಿ ಶನಿವಾರದಂದು (ಟ್ರಿಪಲ್-ಪಂಗಾ) 3 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ರಾತ್ರಿ 7.30, 2ನೇ ಪಂದ್ಯ ರಾತ್ರಿ 8.30 ಮತ್ತು 3ನೇ ಪಂದ್ಯ ರಾತ್ರಿ 9.30ಕ್ಕೆ ಆರಂಭಗೊಳ್ಳಲಿವೆ.


ಟ್ರೋಫಿ ಜತೆಗೆ ನಾಯಕರಾದ ರೋಹಿತ್ ಕುಮಾರ್ (ತೆಲುಗು), ಪ್ರಶಾಂತ್ ಕುಮಾರ್ ರೈ (ಪಟನಾ), ಜಲ್ ಅತ್ರಚಲಿ (ಮುಂಬಾ), ಜೋಗಿಂದರ್ ನರ್ವಾಲ್ (ಡೆಲ್ಲಿ), ನಿತಿನ್ ತೋಮರ್ (ಪುಣೇರಿ), ವಿಕಾಸ್ ಕಂಡೋಲ (ಹರಿಯಾಣ), ಸುನೀಲ್ ಕುಮಾರ್ (ಗುಜರಾತ್), ಪವನ್ ಶೆರಾವತ್ (ಬೆಂಗಳೂರು), ನಿತೇಶ್ ಕುಮಾರ್ (ಯುಪಿ ಯೋಧಾ), ಸುರ್ಜೀತ್ ಸಿಂಗ್ (ತಮಿಳ್), ದೀಪಕ್ ಹೂಡಾ (ಜೈಪುರ), ಮಣಿಂದರ್ ಸಿಂಗ್ (ಬೆಂಗಾಲ್).

*ನಾವು ಎಲ್ಲ ರೀತಿಯ ಸವಾಲುಗಳಿಗೆ ಸಜ್ಜಾಗಿದ್ದು, ಟೂರ್ನಿಯುದ್ದಕ್ಕೂ ಅತ್ಯುತ್ತಮ ಲಿತಾಂಶವನ್ನು ಕಾಣಲು ಯೋಜನೆ ರೂಪಿಸಿದ್ದೇವೆ. ಕೋಚ್ ರಣಧೀರ್ ಸರ್ ನಮಗೆ ಮಾನಸಿಕ ಮತ್ತು ದೈಹಿಕ ತರಬೇತಿಗಳನ್ನು ನೀಡಿದ್ದು, ಈ ಬಾರಿ ಯಶಸ್ಸಿನ ಬೆನ್ನೇರಲು ಸಿದ್ಧಗೊಳಿಸಿದ್ದಾರೆ.
| ಪವನ್ ಶೆರಾವತ್ ಬುಲ್ಸ್ ನಾಯಕ

ಬೆಂಗಳೂರು ಬುಲ್ಸ್ ಪಂದ್ಯಗಳು
ದಿನಾಂಕ: ಎದುರಾಳಿ, ಆರಂಭ
ಡಿಸೆಂಬರ್ 22: ಯು ಮುಂಬಾ, ರಾತ್ರಿ 7.30
ಡಿಸೆಂಬರ್ 24: ತಮಿಳ್ ತಲೈವಾಸ್, ರಾತ್ರಿ 8.30
ಡಿಸೆಂಬರ್ 26: ಬೆಂಗಾಲ್ ವಾರಿಯರ್ಸ್‌, ರಾತ್ರಿ 8.30
ಡಿಸೆಂಬರ್ 30: ಹರಿಯಾಣ ಸ್ಟೀಲರ್ಸ್‌, ರಾತ್ರಿ 8.30
ಜನವರಿ 1: ತೆಲುಗು ಟೈಟಾನ್ಸ್, ರಾತ್ರಿ 8.30
ಜನವರಿ 2: ಪುಣೇರಿ ಪಲ್ಟಾನ್, ರಾತ್ರಿ 8.30
ಜನವರಿ 6: ಜೈಪುರ ಪಿಂಕ್‌ಪ್ಯಾಂಥರ್ಸ್‌, ರಾತ್ರಿ 8.30
ಜನವರಿ 9: ಯುಪಿ ಯೋಧಾ, ರಾತ್ರಿ 8.30
ಜನವರಿ 12: ದಬಾಂಗ್ ದೆಹಲಿ, ರಾತ್ರಿ 8.30
ಜನವರಿ 14: ಗುಜರಾತ್ ಜೈಂಟ್ಸ್ ರಾತ್ರಿ 8.30
ಜನವರಿ 16: ಪಟನಾ ಪೈರೇಟ್ಸ್, ರಾತ್ರಿ 8.30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net