More

    VIDEO: ಬಲಗೈ ಬ್ಯಾಟರ್‌ಗೆ ಎಡಗೈ, ಎಡಗೈ ಬ್ಯಾಟರ್‌ಗೆ ಬಲಗೈ ಬೌಲಿಂಗ್ ಮಾಡ್ತಾರೆ ಈ ಸ್ಪಿನ್ನರ್!

    ನವದೆಹಲಿ: ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಬಲಗೈ ಬ್ಯಾಟ್ಸ್‌ಮನ್‌ಗಳು ಎಡಗೈ ಬೌಲರ್‌ಗಳ ಎದುರು ಪರದಾಡಿದರೆ, ಎಡಗೈ ಬ್ಯಾಟ್ಸ್‌ಮನ್‌ಗಳು ಬಲಗೈ ಬೌಲರ್‌ಗಳ ಎದುರು ಕಷ್ಟಪಡುತ್ತಾರೆ. ಹೀಗಾಗಿ ಎಡಗೈ ಬ್ಯಾಟರ್ ಕ್ರೀಸ್‌ನಲ್ಲಿ ಇದ್ದಾಗ ಬಲಗೈ ಬೌಲರ್‌ಗಳನ್ನು ದಾಳಿಗಿಳಿಸುವುದು ಮತ್ತು ಬಲಗೈ ಬ್ಯಾಟರ್ ಸ್ಟ್ರೈಕ್‌ನಲ್ಲಿ ಇದ್ದಾಗ ಎಡಗೈ ಬೌಲರ್‌ಗೆ ಬೌಲಿಂಗ್ ನೀಡುವುದು ಸಾಮಾನ್ಯ. ಆದರೆ ಎಡಗೈ ಅಥವಾ ಬಲಗೈ ಬ್ಯಾಟರ್ ಇದ್ದಾಗ ಒಬ್ಬನೇ ಬೌಲರ್ ಎರಡೂ ರೀತಿಯ ಬೌಲಿಂಗ್ ಮಾಡುವಂತಾದರೆ? ಇದು ಈಗ ಬರೀ ಪ್ರಶ್ನೆಯಾಗಿ ಉಳಿದಿಲ್ಲ. ಅಂಥ ಸಾಮರ್ಥ್ಯದ ಬೌಲರ್ ಒಬ್ಬರು ಹುಟ್ಟಿಕೊಂಡಿದ್ದಾರೆ. ಅವರೇ ನಿವೇದನ್ ರಾಧಾಕೃಷ್ಣನ್!

    ಭಾರತ ಮೂಲದ ಸ್ಪಿನ್ ಬೌಲರ್ ನಿವೇದನ್ ರಾಧಾಕೃಷ್ಣನ್ ಈ ವಿಶೇಷ ಸಾಮರ್ಥ್ಯದಿಂದಾಗಿ ಇದೀಗ ಆಸ್ಟ್ರೇಲಿಯಾದ 19 ವಯೋಮಿತಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್‌ಗೆ ಪ್ರಕಟಿಸಲಾದ ಆಸ್ಟ್ರೇಲಿಯಾದ 16 ಆಟಗಾರರ ತಂಡದಲ್ಲಿ 18 ವರ್ಷದ ನಿವೇದನ್ ಕೂಡ ಸ್ಥಾನ ಸಂಪಾದಿಸಿದ್ದಾರೆ.

    ನಿವೇದನ್ ರಾಧಾಕೃಷ್ಣನ್ ಕಳೆದ ಐಪಿಎಲ್ ಟೂರ್ನಿಯ ವೇಳೆಗೆ ನೆಟ್ ಬೌಲರ್ ಆಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಅವರು ಪ್ರಧಾನ ತಂಡದ ಭಾಗವಾಗುವ ನಿರೀಕ್ಷೆಯೂ ಇದೆ.

    ನಿವೇದನ್ ರಾಧಾಕೃಷ್ಣನ್ ತಮಿಳುನಾಡಿನ ದಿಂಡಿಗಲ್‌ನಲ್ಲಿ ಜನಿಸಿದ್ದರು. ಆದರೆ ಅವರಿಗೆ 10 ವರ್ಷವಾದಾಗ ಅವರ ಕುಟುಂಬ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿತ್ತು. ಅವರ ತಂದೆ ಅನ್ಬು ಸೆಲ್ವನ್ ಕೂಡ ಮಾಜಿ ಕ್ರಿಕೆಟಿಗರಾಗಿದ್ದಾರೆ. ಜೂನಿಯರ್ ಮಟ್ಟದಲ್ಲಿ ಅವರು ತಮಿಳುನಾಡು ಪರ ಆಡಿದ್ದರು.

    ನಿವೇದನ್ ರಾಧಾಕೃಷ್ಣನ್ ಬಲಗೈ ಮತ್ತು ಎಡಗೈನಲ್ಲಿ ಆಫ್​ ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆಲ್ರೌಂಡರ್ ಆಗಿರುವ ಅವರು ಮೊದಲಿಗೆ ವೇಗಿಯಾಗಿದ್ದರು. ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲೂ ಆಡಿದ್ದರು. ಆಸ್ಟ್ರೇಲಿಯಾ ಕಿರಿಯರ ಕ್ರಿಕೆಟ್ ತಂಡವನ್ನು ಈ ಹಿಂದೆಯೂ ಅವರು ಪ್ರತಿನಿಧಿಸಿದ್ದರು.

    ಅಂದ ಹಾಗೆ ನಿವೇದನ್ ಎರಡೂ ಕೈಯಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯದ ಮೊದಲ ಕ್ರಿಕೆಟಿಗರೇನಲ್ಲ. ಶ್ರೀಲಂಕಾದ ಕಮಿಂದು ಮೆಂಡಿಸ್, ಪಾಕಿಸ್ತಾನದ ಯಾಸಿರ್ ಜಾನ್ ಮತ್ತು ಭಾರತದ ಅಕ್ಷಯ್ ಕರ್ನೇವರ್ ಈಗಾಗಲೆ ದೇಶೀಯ ಕ್ರಿಕೆಟ್‌ನಲ್ಲಿ ಇಂಥ ಸಾಮರ್ಥ್ಯ ಪ್ರದರ್ಶಿಸಿದ್ದಾರೆ ಮತ್ತು ಯಶಸ್ಸು ಕೂಡ ಕಂಡಿದ್ದಾರೆ.

    ಭಾರತ ವಿರುದ್ಧ ಸರಣಿಗೆ ಮುನ್ನ ದಕ್ಷಿಣ ಆಫ್ರಿಕಾಕ್ಕೆ ಹೊಡೆತ, ಪ್ರಮುಖ ವೇಗಿ ಅಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts