ಗಾಯದ ಮೇಲೆ ಮತ್ತೊಂದು ಬರೆ! ಕಡೆಗೂ ಮೌನ ಮುರಿದ ಕ್ರಿಕೆಟಿಗ ಪೃಥ್ವಿ ಶಾ | Prithvi Shaw

ವಿಜಯವಾಣಿ - 2024-12-17T200920.265
Published on

ನವದೆಹಲಿ: ಈ ಬಾರಿ ನಡೆದ ಎರಡು ದಿನಗಳ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ 10 ಬಲಿಷ್ಠ ತಂಡಗಳಿಗೂ ಬೇಡವಾದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​ ಪೃಥ್ವಿ ಶಾ, ಮೂಲ ಬೆಲೆಯಾದ 75 ಲಕ್ಷದಲ್ಲಿಯೇ ಉಳಿದು, ಅಂತಿಮವಾಗಿ ಅನ್​ಸೋಲ್ಡ್​ ಆಟಗಾರರ ಅಡಿ ಹರಾಜಿನಿಂದ ಹೊರಬಿದ್ದರು. ಈ ಸಂಗತಿ ಅಂದು ಕ್ರಿಕೆಟ್​ ಪ್ರಿಯರಲ್ಲಿ ಎಷ್ಟರ ಮಟ್ಟಿಗೆ ಬೇಸರ ಮೂಡಿಸಿತ್ತೋ ಅದರ ದುಪ್ಪಟ್ಟು ಪೃಥ್ವಿಯಲ್ಲಿ ಕಾಡಿದೆ. ಇದರಿಂದ ಹೊರಬರುವ ಮುನ್ನವೇ ಶಾಗೆ ಮತ್ತೊಂದು ಆಘಾತಕಾರಿ ವಿಷಯ ಭಾರೀ ನೋವುಂಟುಮಾಡಿದೆ.

ಪೃಥ್ವಿಗಿಲ್ಲ ಸ್ಥಾನ

ಐಪಿಎಲ್​ ಲೀಗ್​ನಿಂದ ಕೈಬಿಟ್ಟಿದ್ದ ಟೀಮ್ ಇಂಡಿಯಾ ಭವಿಷ್ಯದ ಭರವಸೆಯ ಬ್ಯಾಟರ್​ ಪೃಥ್ವಿ ಶಾರನ್ನು ಇದೀಗ ಬಿಸಿಸಿಐ ನಡೆಸುವ ವಿಜಯ್​ ಹಜಾರೆ ಟ್ರೋಫಿಯಿಂದಲೂ ಹೊರಗಿಡಲಾಗಿದೆ. ವಿಜಯ್ ಹಜಾರೆ ಟ್ರೋಫಿಯ ಮುಂಬೈ ತಂಡದಲ್ಲಿ ಪೃಥ್ವಿಗೆ ಸ್ಥಾನ ನೀಡಿಲ್ಲ. ಈ ವಿಚಾರ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಸಿಸಿಐನ ಪ್ರಮುಖ ದೇಶೀಯ ಸ್ಪರ್ಧೆಯಿಂದ ಪೃಥ್ವಿಯನ್ನು ಏಕೆ ಕೈಬಿಡಲಾಗಿದೆ. ಇದು ಸರಿಯಲ್ಲ ಎಂಬ ಮಾತುಗಳು ಜಾಲತಾಣಗಳಲ್ಲಿ ಕೇಳಿಬಂದಿವೆ.

ಅನ್​ಸೋಲ್ಡ್​ ಪಟ್ಟಿ

ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲೂ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗದ ಪೃಥ್ವಿಗೆ ಇದೀಗ ಬ್ಯಾಕ್​ ಟು ಬ್ಯಾಕ್ ಹೊಡೆತ ಬಿದ್ದಿದೆ. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಓಪನರ್ ಆಗಿ ತಂಡದ ಪರ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿರನ್ನು ಮೂಲ ಬೆಲೆ 75 ಲಕ್ಷಕ್ಕೂ ಖರೀದಿಸದ ಫ್ರಾಂಚೈಸಿಗಳು, ಅವರನ್ನು ಅನ್​ಸೋಲ್ಡ್​ ಪಟ್ಟಿಯಲ್ಲಿ ಇರಿಸುವ ಮೂಲಕ 2025ರ ಐಪಿಎಲ್​ನಿಂದಲೇ ದೂರವಿಟ್ಟಿತು. ಗಾಯದ ಮೇಲೆ ಮತ್ತೆ ಬರೆ ಎಳೆದಂತೆ ಈಗ ವಿಜಯ್ ಹಜಾರೆ ಟ್ರೋಫಿಯಿಂದಲೂ ಅವರನ್ನು ಹೊರಗಿಟ್ಟಿರುವುದು ಸದ್ಯ ಅಚ್ಚರಿ ಮೂಡಿಸಿದೆ.

ಹೇಳು ದೇವರೇ...

ಈ ಎಲ್ಲಾ ಬೆಳವಣಿಗೆಯಿಂದ ತತ್ತರಿಸಿರುವ ಪೃಥ್ವಿ, ತಮಗೆ ಎದುರಾದ ಪರಿಸ್ಥಿಯ ಬಗ್ಗೆ ಕಡೆಗೂ ಮೌನ ಮುರಿದಿದ್ದಾರೆ. "ಹೇಳು ದೇವರೇ ನಾನಿನ್ನು ಏನೇನು ನೋಡಬೇಕು. 65 ಇನ್ನಿಂಗ್ಸ್, 55.7ರ ಸರಾಸರಿಯಲ್ಲಿ 126 ಸ್ಟ್ರೈಕ್ ರೇಟ್‌ನೊಂದಿಗೆ 3,399 ರನ್ ಗಳಿಸಿದರೂ ನಾನು ಇನ್ನೂ ಬೆಸ್ಟ್​ ಸಾಲಿನಲ್ಲಿಲ್ಲ. ಏನೇ ಆದರೂ ನಿಮ್ಮ ಮೇಲೆ ನಾನು ಅಪಾರ ನಂಬಿಕೆ ಇಡುತ್ತೇನೆ ಮತ್ತು ಜನರು ನನ್ನನ್ನು ಈಗಲೂ ನಂಬುತ್ತಾರೆ ಎಂದು ಭಾವಿಸುವೆ. ಕಾರಣ, ಖಂಡಿತ ನಾನು ವಾಪಾಸ್​ ಬರುತ್ತೇನೆ. ಓಂ ಸಾಯಿ ರಾಮ್" ಎಂದು ಶಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net