ರಣಜಿ ಟ್ರೋಫಿ 2023-24: ಪೃಥ್ವಿ​ ಶಾ ಈಸ್ ಬ್ಯಾಕ್!

ವಿಜಯವಾಣಿ - 2024-02-01T102201.745
Published on

ಮುಂಬೈ: ಭಾರತೀಯ ಪುರುಷರ ಕ್ರಿಕೆಟ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಆದ ಪೃಥ್ವಿ ಶಾ ಅವರು ದೀರ್ಘಕಾಲದ ಇಂಜುರಿಯಿಂದ ಇದೀಗ ಮರಳಿದ್ದು, ಫೆಬ್ರವರಿ 2ರಿಂದ ಪ್ರಾರಂಭವಾಗಲಿರುವ ರಣಜಿ ಟ್ರೋಫಿ ಪಂದ್ಯಗಳಿಗೂ ಮುನ್ನವೇ ಮುಂಬೈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಪೃಥ್ವಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಸಜ್ಜಾಗಿದ್ದು, ಕ್ರಿಕೆಟ್​ ಅಭಿಮಾನಿಗಳು ಭಾರೀ ಕುತೂಹಲ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಮೊಣಕಾಲಿಗೆ ಗಾಯವಾದ ನಂತರ ಪೃಥ್ವಿ ಆರು ತಿಂಗಳ ಕಾಲ ಆಟದಿಂದ ಹೊರಗುಳಿದಿದ್ದರು. ಈ ಇಂಜುರಿಯಿಂದ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯನ್ನು ಕಳೆದುಕೊಳ್ಳುವಂತಾಯಿತು. ಗಾಯಗೊಂಡ ಬೆನ್ನಲ್ಲೇ ಶಾ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನರ್ವಸತಿಗೆ ಒಳಪಡಿಸಲಾಗಿತ್ತು.

ಈ ಹಿಂದೆ ಪೃಥ್ವಿ ಶಾ 2023-24ರ ರಣಜಿ ಟ್ರೋಫಿಯ ಸಂಪೂರ್ಣ ಪಂದ್ಯವನ್ನು ಆಡುವುದಿಲ್ಲ ಎಂದು ವರದಿಯಾಗಿತ್ತು. ಕಾರಣ ಎನ್‌ಸಿಎ ನೀಡಿದ ರಿಪೋರ್ಟ್​! ಗಾಯದಿಂದ ಹೊರಗುಳಿದ ನಂತರ ಶಾ ಸದ್ಯದ ಮಟ್ಟಿಗೆ ಯಾವ ಪಂದ್ಯಗಳನ್ನು ಆಡುವುದಿಲ್ಲ ಎಂದು ತಿಳಿಸಿತ್ತು. ಆದ್ರೆ, ಈಗ ಶಾಗೆ 'ಆರ್‌ಟಿಪಿ' ಪ್ರಮಾಣಪತ್ರ ನೀಡಿದ ಎನ್‌ಸಿಎ, ಮುಂಬೈನ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲು ಅನುಮತಿಸಿದೆ.

"'ಆರ್‌ಟಿಪಿ ಪ್ರಮಾಣಪತ್ರವನ್ನು ಸ್ವೀಕರಿಸಿದ ಬೆನ್ನಲ್ಲೇ ಮುಂಬೈ ತಂಡವನ್ನು ಸೇರಿದ ಪೃಥ್ವಿ ಶಾ, ಎನ್‌ಸಿಎ ನೆಟ್ಸ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ತರಬೇತಿ ನಡೆಸುತ್ತಿದ್ದಾರೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಸದ್ಯ ತಂಡಕ್ಕೆ ಶಾ ಮರಳಿದ್ದು, ಮುಂಬೈಗೆ ಆನೆ ಬಲ ದೊರಕಿದಂತಾಗಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net