ಏರುಗತಿಯಲ್ಲಿ ಆರ್ಥಿಕತೆ; ನಿರೀಕ್ಷೆ ಹುಟ್ಟಿಸಿರುವ ಕೇಂದ್ರ ಮಧ್ಯಂತರ ಬಜೆಟ್​

Nirmala Sitaraman
Published on

ಬಜೆಟ್ ಅಧಿವೇಶನ ಬುಧವಾರ ಆರಂಭಗೊಂಡಿದ್ದು, ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಕಳೆದ ಐದು ವರ್ಷಗಳ ಬಜೆಟ್ ಅವಲೋಕಿಸಿದಾಗ, ದೇಶದ ಆರ್ಥಿಕತೆಯ ಏರುಗತಿ ಹೊಸ ಆಶಾವಾದವನ್ನು ಸೃಷ್ಟಿಸಿದೆ. ಕರೊನಾದಂಥ ಭೀಕರ ಸವಾಲನ್ನು ಯಶಸ್ವಿಯಾಗಿ ಸೋಲಿಸಿದ ಹೆಗ್ಗಳಿಕೆ ಭಾರತೀಯ ಆರ್ಥಿಕತೆಯದ್ದು. ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ, ಈ ಬಜೆಟ್​ನಲ್ಲಿ ದೊಡ್ಡ ಘೋಷಣೆಗಳು ಇರುವುದಿಲ್ಲವಾದರೂ, ದೇಶ ಆರ್ಥಿಕತೆಯಲ್ಲಿ ಮುಂದೆ ಸಾಗಬೇಕಾದ ಸಮರ್ಥ ಚಿತ್ರಣವನ್ನಂತೂ ಒದಗಿಸಲಿದೆ ಎಂಬ ಅಭಿಪ್ರಾಯ ತಜ್ಞರದ್ದು. ಸಾಮಾಜಿಕ ಕಲ್ಯಾಣ ಯೋಜನೆಗಳು, ಬಡವರಿಗೆ ಉಚಿತ ಆಹಾರಧಾನ್ಯದಂಥ ಅನುಕೂಲಗಳು ಮುಂದುವರಿಯಲಿವೆ.

2013-14ರಲ್ಲಿ ಯುಪಿಎಯಿಂದ ಎನ್​ಡಿಎಗೆ ಕೇಂದ್ರದಲ್ಲಿ ಅಧಿಕಾರ ಹಸ್ತಾಂತರವಾದಾಗ ಭಾರತದ ನಿವ್ವಳ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) 1.86 ಟ್ರಿಲಿಯನ್ ಡಾಲರ್​ಗಳಷ್ಟಿತ್ತು. 2018-19ರಲ್ಲಿ ಇದು 2.83 ಟ್ರಿಲಿಯನ್ ಡಾಲರ್​ಗಳಾಯಿತು. ಅಂದರೆ ಐದೇ ವರ್ಷಗಳಲ್ಲಿ ಸರಿಸುಮಾರು ಒಂದು ಟ್ರಿಲಿಯನ್ ಡಾಲರ್​ಗಳ ವೃದ್ಧಿ ಸಾಧ್ಯವಾಗಿದ್ದು ಸಾಧಾರಣ ಸಂಗತಿಯೇನಲ್ಲ. 2021-22ರಲ್ಲಿ 3.15 ಟ್ರಿಲಿಯನ್ ಡಾಲರ್​ಗಳ ಜಿಡಿಪಿ ದಾಖಲಿಸಿದ ಭಾರತ, 2022-23ರಲ್ಲಿ 3.39 ಟ್ರಿಲಿಯನ್ ಡಾಲರ್​ಗಳಿಗೆ ಏರಿಕೆ ಕಂಡಿತು. 2023ರ ನವೆಂಬರ್​ನಲ್ಲಿ ದೇಶದ ಜಿಡಿಪಿ 3.72 ಟ್ರಿಲಿಯನ್ ಡಾಲರ್​ಗಳನ್ನು ದಾಟಿದೆ. ಒಂಬತ್ತು ವರ್ಷಗಳಲ್ಲಿ ಭಾರತದ ಜಿಡಿಪಿ ಎರಡು ಪಟ್ಟು ಹೆಚ್ಚಿದೆ. ಹಾಗಾಗಿಯೇ, 2025ರ ಹೊತ್ತಿಗೆ ಭಾರತವನ್ನು ಐದು ಟ್ರಿಲಿಯನ್ ಡಾಲರ್​ಗಳ ಅರ್ಥವ್ಯವಸ್ಥೆಯನ್ನಾಗಿಸುವ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹಲವು ಸಂದರ್ಭಗಳಲ್ಲಿ ಪುನರುಚ್ಚರಿಸಿದ್ದಾರೆ.

ಭಾರತವು ಈಗಾಗಲೇ ಫ್ರಾನ್ಸ್, ಬ್ರಿಟನ್​ಗಳನ್ನು ಹಿಂದೆ ಹಾಕಿ ಜಗತ್ತಿನ ಐದನೆಯ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದುನಿಂತಿದೆ. ಹತ್ತು ವರ್ಷಗಳಲ್ಲಿ ಸಾಧಿಸಿರುವ ಈ ಪ್ರಗತಿ, ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಹೊಸ ಎತ್ತರಕ್ಕೆ ಕೊಂಡೊಯ್ಯಲು ಅನುವು ಮಾಡಿಕೊಡಲಿದೆ.

80 ಕೋಟಿ ಜನರಿಗೆ ಉಚಿತವಾಗಿ ಆಹಾರಧಾನ್ಯಗಳನ್ನು ಒದಗಿಸಲಾಗುತ್ತಿದ್ದು, ಮೂರು ಕೋಟಿ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ನಿರ್ವಿುಸಿ ಕೊಡಲಾಗಿದೆ. ಹತ್ತು ಕೋಟಿ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿಗಳ ಆರೋಗ್ಯ ವಿಮೆ, ಹನ್ನೊಂದು ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮುಖ್ಯವಾಗಿ, ಕಳೆದ ಒಂದು ದಶಕದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುಮು ಸಂಸತ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದು, ಆರ್ಥಿಕ ನೀತಿಗಳು ಸರಿಯಾದ ದಿಕ್ಕಿನಲ್ಲಿ ಸಾಗಿವೆ ಎಂಬುದಕ್ಕೆ ಸಾಕ್ಷಿ. ಈ ಎಲ್ಲ ಸಕಾರಾತ್ಮಕ ಸಂಗತಿಗಳ ಹಿನ್ನೆಲೆಯಲ್ಲಿ ಸ್ವಾಭಾವಿಕವಾಗಿಯೇ ಬಜೆಟ್ ಮೇಲಿನ ನಿರೀಕ್ಷೆ ಹೆಚ್ಚಿದೆ. ಹೊಸ ಸರ್ಕಾರ ಬಂದ ಮೇಲೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆಯಾದರೂ, ಮಧ್ಯಮವರ್ಗದ ತೆರಿಗೆದಾರರು ವಿತ್ತ ಸಚಿವರ ಘೋಷಣೆಗಳತ್ತ ದೃಷ್ಟಿ ನೆಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net