

ಚಿತ್ರಗಳು: ರಾಘವೇಂದ್ರ ಸಿ.
ಬೆಂಗಳೂರು: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ಸುಮಾರು ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ಕ್ರಿಕೆಟ್ ಜ್ವರ ಏರಲಾರಂಭಿಸಿದೆ. ಭಾನುವಾರ ಬೆಂಗಳೂರಿನ ಪ್ರತ್ಯಕ್ಷಗೊಂಡ ವಿಶ್ವಕಪ್ ಟೂರ್ನಿಯ ವಿಜೇತರಿಗೆ ನೀಡಲಾಗುವ ಮಿರುಗುವ ಚಿನ್ನದ ಟ್ರೋಫಿ, ಕ್ರಿಕೆಟ್ ಪ್ರೇಮಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಮಲ್ಲೇಶ್ವರದ ಮಂತ್ರಿ ಮಾಲ್ನಲ್ಲಿ ವಿಶ್ವಕಪ್ ಟ್ರೋಫಿಯನ್ನು ಭಾನುವಾರ ಪ್ರದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಕ್ರಿಕೆಟ್ ಪ್ರೇಮಿಗಳು ಮತ್ತು ಚಿಣ್ಣರು ಟ್ರೋಫಿಯೊಂದಿಗೆ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಏಕದಿನ ವಿಶ್ವಕಪ್ ಟೂರ್ನಿ ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 17ರವರೆಗೆ ನಡೆಯಲಿದೆ. ಅಹಮದಾಬಾದ್ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಅದಕ್ಕೆ ಹಿಂದಿನ ದಿನ ಅಂದರೆ ಅಕ್ಟೋಬರ್ 4ರಂದು ಅಲ್ಲೇ ಉದ್ಘಾಟನಾ ಸಮಾರಂಭವೂ ಆಯೋಜನೆಗೊಂಡಿದೆ. ಬೆಂಗಳೂರು ಸಹಿತ ದೇಶದ 10 ತಾಣಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.