

ನವದೆಹಲಿ: ಕರೊನಾ ಹಾವಳಿಯಿಂದಾಗಿ ದೇಶದ ಮತ್ತೊಂದು ಕ್ರೀಡಾ ಲೀಗ್ ಮುಂದೂಡಿಕೆಯಾಗಿದೆ. ಚೊಚ್ಚಲ ಆವೃತ್ತಿಯ ಪ್ರೀಮಿಯರ್ ಹ್ಯಾಂಡ್‌ಬಾಲ್ ಲೀಗ್ (ಪಿಎಚ್‌ಎಲ್) ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡುವ ನಿರ್ಧಾರವನ್ನು ಭಾರತೀಯ ಹ್ಯಾಂಡ್‌ಬಾಲ್ ಒಕ್ಕೂಟ (ಎಚ್‌ಎ್ಐ) ಉಪಾಧ್ಯಕ್ಷ ಆನಂದೇಶ್ವರ್ ಪಾಂಡೆ ಶುಕ್ರವಾರ ಪ್ರಕಟಿಸಿದ್ದಾರೆ. ಮೂಲ ವೇಳಾಪಟ್ಟಿಯ ಪ್ರಕಾರ ಡಿಸೆಂಬರ್ 24ರಿಂದ ಜನವರಿ 10ರವರೆಗೆ ಜೈಪುರದ ಸವಾಯಿ ಮಾನ್ ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಬೇಕಾಗಿತ್ತು.
ಆಟಗಾರರ ಸುಕರ‌್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟೂರ್ನಿಯನ್ನು ನಿಗದಿಯಂತೆ ಆಯೋಜಿಸಲು ಸಿದ್ಧತೆ ನಡೆಸಿದ್ದರೂ, ಹಾಲಿ ಪರಿಸ್ಥಿತಿಯಲ್ಲಿ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಟೂರ್ನಿಯ ಹೊಸ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಆನಂದೇಶ್ವರ್ ಪಾಂಡೆ ತಿಳಿಸಿದ್ದಾರೆ. ಈ ಮುನ್ನ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಮತ್ತು ಪ್ರೊ ಕಬಡ್ಡಿ ಲೀಗ್‌ಗಳು ಮುಂದೂಡಲ್ಪಟ್ಟಿದ್ದವು.
ವಿದೇಶಿ ಆಟಗಾರರ ಕಡ್ಡಾಯ ಕ್ವಾರಂಟೈನ್ ನಿಯಮಾವಳಿ ಮತ್ತು ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧವಿರುವ ಕಾರಣದಿಂದಾಗಿ ಟೂರ್ನಿ ಮುಂದೂಡಿಕೆ ಅನಿವಾರ‌್ಯವೆನಿಸಿದೆ. 180 ದಿನಗಳ ಟೂರ್ನಿಯಲ್ಲಿ ಆಟಗಾರರು, ಅಧಿಕಾರಿಗಳನ್ನು ಒಳಗೊಂಡಂತೆ ಸುಮಾರು 350 ಜನರು ಪಾಲ್ಗೊಳ್ಳಬೇಕಾಗಿತ್ತು. ಟೂರ್ನಿಯಲ್ಲಿ 6 ತಂಡಗಳಾದ ತೆಲಂಗಾಣ ಟೈಗರ್ಸ್, ಯುಪಿ ಐಕಾನ್ಸ್, ಮಹಾರಾಷ್ಟ್ರ ಹ್ಯಾಂಡ್‌ಬಾಲ್ ಹಸ್ಟ್‌ಲರ್ಸ್, ಕಿಂಗ್‌ಹ್ವಾಕ್ಸ್ ರಾಜಸ್ಥಾನ, ಬೆಂಗಾಲ್ ಬ್ಲೂಸ್ ಮತ್ತು ಪಂಜಾಬ್ ಪಿಟ್‌ಬುಲ್ಸ್ ಆಡಬೇಕಾಗಿತ್ತು.