ಏಷ್ಯನ್​ ಗೇಮ್ಸ್​​ ಜಿಮ್ನಾಸ್ಟಿಕ್ಸ್​ನಲ್ಲಿ ಫೈನಲ್​ಗೇರಿದ ಪ್ರಣತಿ ನಾಯಕ್​

pranati web
Published on

ಹಾಂಗ್​ರೆೌ: ಏಷ್ಯಾಡ್​ ಜಿಮ್ನಾಸ್ಟಿಕ್ಸ್​ನಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿರುವ ಪ್ರಣತಿ ನಾಯಕ್​ ಮಹಿಳೆಯರ ವಾಲ್ಟ್​ ಮತ್ತು ಆಲ್ರೌಂಡ್​ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ್ದಾರೆ. ಆಲ್ರೌಂಡ್​ ವಿಭಾಗದಲ್ಲಿ ಪ್ರಣತಿ 44.232 ಅಂಕ ಗಳಿಸಿ 23ನೇ ಸ್ಥಾನ ಪಡೆದರು. ಆದರೆ ಫೈನಲ್​ಗೆ ಒಂದು ದೇಶದಿಂದ ಗರಿಷ್ಠ ಇಬ್ಬರೇ ಸ್ಪರ್ಧಿಗಳು ಪ್ರವೇಶಿಸಲು ಅವಕಾಶವಿದ್ದ ಕಾರಣ, ಪ್ರಣತಿ 18 ಸ್ಪರ್ಧಿಗಳ ಫೈನಲ್​ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು. ಪಶ್ಚಿಮ ಬಂಗಾಳದ ಪ್ರಣತಿ ವಾಲ್ಟ್​ನಲ್ಲಿ 12.716, ಅನ್​ಈವನ್​ ಬಾರ್​ನಲ್ಲಿ 10.300, ಬ್ಯಾಲೆನ್ಸ್​ ಬೀಮ್​ನಲ್ಲಿ 11.233 ಮತ್ತು ಫ್ಲೋರ್​ನಲ್ಲಿ 9.833 ಅಂಕ ಗಳಿಸಿದರು. ಚೀನಾ, ಜಪಾನ್​, ಚೀನಾ ತೈಪೆ, ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ 3ನೇ ಸ್ಪರ್ಧಿಗಳು ನಿರಾಸೆ ಅನುಭವಿಸಿದರು.

ಬಾಸ್ಕೆಟ್​ಬಾಲ್​ನಲ್ಲಿ ಮಿಶ್ರಫಲ: 3/3 ಬಾಸ್ಕೆಟ್​ಬಾಲ್​ನಲ್ಲಿ ಭಾರತದ ಪುರುಷರ ತಂಡ ಮಲೇಷ್ಯಾ ಎದುರು 20-16ರಿಂದ ಗೆದ್ದರೆ, ಮಹಿಳಾ ತಂಡ ಉಜ್ಬೇಕಿಸ್ತಾನ ಎದುರು 14-19ರಿಂದ ಪರಾಭವಗೊಂಡಿತು.

ಗರಿಮಾಗೆ ನಿರಾಸೆ: ಭಾರತದ ಗರಿಮಾ ಚೌಧರಿ ಜುಡೋ ಸ್ಪರ್ಧೆಯ 70 ಕೆಜಿ ವಿಭಾಗದ 16ರ ಟ್ಟದಲ್ಲಿ ಫಿಲಿಪ್ಪಿನ್ಸ್​ನ ರ್ಯಾಕೊ ಸಲಿನಸ್​ ಎದುರು ಸೋತು ನಿರಾಸೆ ಅನುಭವಿಸಿದರು.

ಚೆಸ್​ನಲ್ಲಿ ವಿದಿತ್​ಗೆ 2 ಜಯ: ಭಾರತದ 3ನೇ ಶ್ರೇಯಾಂಕಿತ ಆಟಗಾರ ವಿದಿತ್​ ಗುಜರಾತಿ ಏಷ್ಯಾಡ್​ ಚೆಸ್​ ಸ್ಪರ್ಧೆಯ 3, 4ನೇ ಸುತ್ತಿನ ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಸೋಮವಾರದ ಪಂದ್ಯಗಳಲ್ಲಿ ಅವರು ಎರಡೂ ಪಂದ್ಯ ಗೆದ್ದ ಏಕೈಕ ಭಾರತೀಯರೆನಿಸಿದರು. ವಿದಿತ್​ ಈಗ 3 ಅಂಕದೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಅರ್ಜುನ್​ ಎರಿಗೈಸಿ ಒಂದು ಪಂದ್ಯ ಗೆದ್ದು, ಇನ್ನೊಂದರಲ್ಲಿ ಡ್ರಾಕ್ಕೆ ತೃಪ್ತಿಪಟ್ಟರು. ಮಹಿಳೆಯರ ವಿಭಾಗದಲ್ಲಿ ಕೊನೆರು ಹಂಪಿ ಮತ್ತು ದ್ರೋಣವಲ್ಲಿ ಹರಿಕಾ ಒಂದು ಪಂದ್ಯ ಸೋತು, ಮತ್ತೊಂದು ಪಂದ್ಯ ಡ್ರಾಗೊಳಿಸಿದರು. ಇಬ್ಬರೂ ಮೊದಲ ದಿನ ಎರಡೂ ಪಂದ್ಯ ಗೆದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net