

ಹುಬ್ಬಳ್ಳಿ: ಆರಂಭಿಕ ಪ್ರಭ್ಸಿಮ್ರಾನ್ ಸಿಂಗ್ (100 ರನ್, 146 ಎಸೆತ, 17 ಬೌಂಡರಿ) ಶತಕ ಹಾಗೂ ಅಭಿಷೇಕ್ ಶರ್ಮ (91 ರನ್, 123 ಎಸೆತ, 9 ಬೌಂಡರಿ, 3 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಮೊದಲ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡಕ್ಕೆ ದಿಟ್ಟ ಪ್ರತಿರೋಧ ತೋರಿದ್ದು, ಸೋಲು ತಪ್ಪಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.
ರಾಜನಗರ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಭಾನುವಾರ 6 ವಿಕೆಟ್ಗೆ 461 ರನ್ಗಳಿಂದ ಆಟ ಮುಂದುವರಿಸಿದ ಕರ್ನಾಟಕ ತಂಡ 8 ವಿಕೆಟ್ಗೆ 514 ರನ್ಗಳ ಬೃಹತ್ ಮೊತ್ತ ಪೇರಿಸಿ ಪ್ರಥಮ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು ಮತ್ತು 362 ರನ್ಗಳ ಭಾರಿ ಮುನ್ನಡೆ ಸಾಧಿಸಿತು. ಪ್ರತಿಯಾಗಿ ದಿಟ್ಟ ಉತ್ತರ ನೀಡಲಾರಂಭಿಸಿದ ಪಂಜಾಬ್ ದಿನದಂತ್ಯಕ್ಕೆ ತನ್ನ ದ್ವೀತಿಯ ಇನಿಂಗ್ಸ್ನಲ್ಲಿ 3 ವಿಕೆಟ್ಗೆ 238 ರನ್ ಪೇರಿಸಿದೆ. ಪ್ರವಾಸಿ ಪಂಜಾಬ್ ತಂಡ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 124 ರನ್ ಗಳಿಸಬೇಕಿದೆ. ನಾಯಕ ಮಂದೀಪ್ ಸಿಂಗ್ (15*) ಹಾಗೂ ನೇಹಲ್ ವಧೇರಾ (9*) ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ಬಳಗ ಸೋಮವಾರ ಪಂಜಾಬ್ ತಂಡದ ಕೊನೇ 7 ವಿಕೆಟ್ಗಳನ್ನು ಬೇಗನೆ ಕಬಳಿಸಿ ಗೆಲುವಿನೊಂದಿಗೆ ಪೂರ್ಣ 6 ಅಂಕ ಸಂಪಾದಿಸಲು ಹೋರಾಡಲಿದೆ.
500ರ ಗಡಿ ದಾಟಿದ ಮಯಾಂಕ್ ಪಡೆ
ಬೆಳಗ್ಗೆ 6 ವಿಕೆಟ್ಗೆ 461 ರನ್ಗಳಿಂದ ಆಟ ಮುಂದುವರಿಸಿದ ಕರ್ನಾಟಕ ಮೊದಲ ಓವರ್ನಲ್ಲೇ ವೈಶಾಕ್ ವಿಜಯಕುಮಾರ್ ವಿಕೆಟ್ ಕಳೆದುಕೊಂಡಿತು. ವಿಕೆಟ್ ಕೀಪರ್-ಬ್ಯಾಟರ್ ಎಸ್. ಶರತ್ (76 ರನ್, 193ಎಸೆತ, 6 ಬೌಂಡರಿ) ಹಾಗೂ ರೋಹಿತ್ ಕುಮಾರ್ 8ನೇ ವಿಕೆಟ್ಗೆ 42ರನ್ ಸೇರಿಸಿ ತಂಡದ ಮೊತ್ತವನ್ನು 500ರ ಗಡಿ ದಾಟಿಸಿದರು. ಪಂಜಾಬ್ ವೇಗಿ ಸಿದ್ದಾರ್ಥ್ ಕೌಲ್, ಶರತ್ರನ್ನು ಎಲ್ಬಿ ಬಲೆಗೆ ಕೆಡವಿದರು. ಇದಾದ ಕೆಲ ನಿಮಿಷಗಳಲ್ಲಿ ನಾಯಕ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡದ ಇನಿಂಗ್ಸ್ ಡಿಕ್ಲೇರ್ ಮಾಡಿದರು.
ಸೋಲು ತಪ್ಪಿಸಲು ಪಂಜಾಬ್ ಫೈಟ್
ಪ್ರಥಮ ಇನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದ್ದ ಪಂಜಾಬ್ಗೆ ದ್ವೀತಿಯ ಇನಿಂಗ್ಸ್ನಲ್ಲಿ ಉತ್ತಮ ಆರಂಭದ ಅವಶ್ಯಕತೆ ಇತ್ತು. ಅದಕ್ಕೆ ತಕ್ಕಂತೆ ಆಟವಾಡಿದ ಆರಂಭಿಕರಾದ ಅಭಿಷೇಕ್ ಶರ್ಮ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಮೊದಲ ವಿಕೆಟ್ಗೆ 192 ರನ್ ಸೇರಿಸಿದರು. ಹೆಚ್ಚು ಅಕ್ರಮಣಕಾರಿಯಾಗಿದ್ದ ಅಭಿಷೇಕ್, ರೋಹಿತ್ ಕುಮಾರ್ ಓವರ್ವೊಂದರಲ್ಲಿ ಸತತವಾಗಿ 1 ಬೌಂಡರಿ, 3 ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದರು. ಅಭಿಷೇಕ್ 69 ರನ್ಗಳಿಸಿದ್ದಾಗ ವೇಗಿ ವಾಸುಕಿ ಕೌಶಿಕ್ ಎಸೆತದಲ್ಲಿ ಬದಲಿ ಕ್ಷೇತ್ರರಕ್ಷಕ ಶಶಿಕುಮಾರ ಕ್ಯಾಚ್ ಬಿಟ್ಟರು. ಇದರ ಲಾಭ ಪಡೆದ ಪಂಜಾಬ್ ಚಹಾ ವಿರಾಮದವರೆಗೆ ವಿಕೆಟ್ ನಷ್ಟವಿಲ್ಲದೆ 169ರನ್ ಗಳಿಸಿತು. ಬಳಿಕ ವೈಶಾಕ್ ಬೌಲಿಂಗ್ನಲ್ಲಿ 3 ಬೌಂಡರಿ ಬಾರಿಸಿದ ಪ್ರಭ್ಸಿಮ್ರಾನ್, ಸಮರ್ಥ್ ಬೌಲಿಂಗ್ನಲ್ಲಿ 1 ರನ್ ಗಳಿಸಿ ಶತಕ ಪೂರೈಸಿದರು. ಅಭಿಷೇಕ್ ಶರ್ಮರನ್ನು ಬೌಲ್ಡ್ ಮಾಡಿ ಸಮರ್ಥ್ ಕರ್ನಾಟಕಕ್ಕೆ ಮೊದಲ ವಿಕೆಟ್ ಒದಗಿಸಿದರು. ಮುಂದಿನ ಓವರ್ನಲ್ಲಿ ವಿದ್ವತ್ ಕಾವೇರಪ್ಪ ಎಸೆತದಲ್ಲಿ ಪ್ರಭ್ಸಿಮ್ರಾನ್ ಸಹ ಬೌಲ್ಡ್ ಆದರು. ನಮನ್ ಧೀರ್ರನ್ನು ಔಟ್ ಮಾಡಿ ಶುಭಾಂಗ್ ಹೆಗ್ಡೆ ಪಂದ್ಯದಲ್ಲಿ ಮೊದಲ ವಿಕೆಟ್ ಪಡೆದರು. ಪ್ರಭ್ಸಿಮ್ರಾನ್ಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇದು 4ನೇ ಶತಕವಾಗಿದೆ.
ಪಂಜಾಬ್: 152 ಮತ್ತು 68 ಓವರ್ಗಳಲ್ಲಿ 3 ವಿಕೆಟ್ಗೆ 238 (ಅಭಿಷೇಕ್ ಶರ್ಮ 91, ಪ್ರಭ್ಸಿಮ್ರಾನ್ ಸಿಂಗ್ 100, ನಮನ್ ಧೀರ್ 20, ಮಂದೀಪ್ ಸಿಂಗ್ 15*, ನೇಹಲ್ ವಧೇರಾ 9*, ವಿದ್ವತ್ ಕಾವೇರಪ್ಪ 28ಕ್ಕೆ 1, ಸಮರ್ಥ್ 12ಕ್ಕೆ 1, ಶುಭಾಂಗ್ ಹೆಗ್ಡೆ 54ಕ್ಕೆ 1). ಕರ್ನಾಟಕ: 140 ಓವರ್ಗಳಲ್ಲಿ 8 ವಿಕೆಟ್ಗೆ 514 (ಎಸ್. ಶರತ್ 76, ವೈಶಾಕ್ ವಿಜಯಕುಮಾರ್ 19, ರೋಹಿತ್ಕುಮಾರ್ ಎ.ಸಿ. 22*, ವಿದ್ವತ್ ಕಾವೇರಪ್ಪ 4*, ಅರ್ಷದೀಪ್ ಸಿಂಗ್ 92ಕ್ಕೆ 3, ಪ್ರೇರಿತ್ ದತ್ತ್ 84ಕ್ಕೆ 2, ನಮನ್ ಧೀರ್ 46ಕ್ಕೆ 2, ಸಿದ್ದಾರ್ಥ್ ಕೌಲ್ 94ಕ್ಕೆ 1).