

ದೋಹಾ: ಆರಂಭಿಕ ಮುನ್ನಡೆಯ ನಡುವೆಯೂ ವಿವಾದಾತ್ಮಕ ಗೋಲಿನಿಂದಾಗಿ ಭಾರತೀಯ ಫುಟ್ಬಾಲ್ ತಂಡ 2026ರ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಆತಿಥೇಯ ಕತಾರ್ ವಿರುದ್ಧದ ಪ್ರಮುಖ ಪಂದ್ಯದಲ್ಲಿ 1-2 ಗೋಲುಗಳಿಂದ ಪರಾಭವಗೊಂಡಿತು. ಇದರೊಂದಿಗೆ ಮೊದಲ ಬಾರಿಗೆ ಅರ್ಹತಾ ಕೂಟದ 3ನೇ ಸುತ್ತಿಗೆ ಪ್ರವೇಶಿಸುವ ಐತಿಹಾಸಿಕ ಅವಕಾಶವನ್ನು ಕೈಚೆಲ್ಲಿದೆ.
ಮಂಗಳವಾರ ನಡೆದ 2ನೇ ಅರ್ಹತಾ ಸುತ್ತಿನ ಎ ಗುಂಪಿನ ತನ್ನ 6ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಲಲ್ಲಿಯಂಜುವಲಾ ಚಂಗ್ಟೆ 37ನೇ ನಿಮಿಷದಲ್ಲಿ ಸಿಡಿಸಿದ ಗೋಲಿನಿಂದ ಮುನ್ನಡೆ ಸಾಧಿಸಿತು. 73ನೇ ನಿಮಿಷದಲ್ಲಿ ಕತಾರ್ ಪರ ಯೂಸೆಫ್ ಅಯೆಮೆನ್ ಸಮಬಲದ ಗೋಲು ಬಾರಿಸಿದರು. ಆದರೆ ಈ ವೇಳೆ ಚೆಂಡು ಗೋಲು ಪೆಟ್ಟಿಗೆಯ ಬಳಿಕ ಮೈದಾನದಿಂದ ಹೊರಹೋಗಿದ್ದರೂ ಗೋಲನ್ನು ಮಾನ್ಯ ಮಾಡುವ ಮೂಲಕ ರೆಫ್ರಿ ವಿವಾದಾತ್ಮಕ ತೀರ್ಪು ನೀಡಿದರು. 85ನೇ ನಿಮಿಷದಲ್ಲಿ ಅಹ್ಮದ್ ಅಲ್ ರಾವಿ ಗೆಲುವಿನ ಗೋಲು ಸಿಡಿಸಿ ಭಾರತದ ಕನಸು ಭಗ್ನಗೊಳಿಸಿದರು.