Police: ಡಿಎಸ್ಪಿಯಾಗಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್!

siraj
Published on

ಹೈದರಾಬಾದ್​: ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ತೆಲಂಗಾಣ ಪೊಲೀಸ್(Police) ಇಲಾಖೆಯಲ್ಲಿ ಡಿಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಖಾಕಿ ಸಮವಸ್ತ್ರ ಧರಿಸಿ ಲಾಠಿ ಹಿಡಿದು ನಿಂತಿರುವ ಸಿರಾಜ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಸಿರಾಜ್​ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಗ್ರೂಪ್-1 ಉದ್ಯೋಗದ ಜೊತೆಗೆ ಹೈದರಾಬಾದ್​ನಲ್ಲಿ 600 ಚದರ ಗಜ ಭೂಮಿಯನ್ನು ಮಂಜೂರು ಮಾಡಿದ್ದಾರೆ. ಶುಕ್ರವಾರ (ಅ.12) ತೆಲಂಗಾಣ ಡಿಜಿಪಿ ಜಿತೇಂದರ್ ಅವರೊಂದಿಗೆ ವರದಿ ಮಾಡಿದ ಸಿರಾಜ್, ಅವರ ಕೈಯಿಂದ ನೇಮಕಾತಿ ದಾಖಲೆಯನ್ನು ಪಡೆದರು.

ಟೀಂ ಇಂಡಿಯಾ ಆಟಗಾರ ಮತ್ತು ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಮಹೇಶ್ ಭಾಗವತ್, ರಮೇಶ್, ಸಂಸದ ಅನಿಲ್ ಕುಮಾರ್ ಯಾದವ್ ಇದ್ದರು.

ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಸಿರಾಜ್‌ಗೆ ಗ್ರೂಪ್-1 ಅಧಿಕಾರಿ ಹುದ್ದೆ ನೀಡಿದ್ದಾರೆ.

ಇದಕ್ಕೂ ಮುನ್ನ ಸಿರಾಜ್ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ರೇವಂತ್ ರೆಡ್ಡಿ ಮಾತನಾಡಿ, ಬಡ ಕುಟುಂಬದಿಂದ ಬಂದಿರುವ ಮೊಹಮ್ಮದ್ ಸಿರಾಜ್, ಕಷ್ಟಪಟ್ಟು ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೈದರಾಬಾದ್ ನಗರಕ್ಕೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net