

ನವದೆಹಲಿ: ಕಳೆದ ಒಂದೂವರೆ ತಿಂಗಳಿಂದ ಐಪಿಎಲ್ ಆಟಗಾರರಿಗೆ ಬಯೋಬಬಲ್ ವಾತಾವರಣದಲ್ಲೇ ಜೀವನವಾಗಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಬಯೋಬಬಲ್ ಕುರಿತು ಹಲವು ಮಾರ್ಗಸೂಚಿಗಳನ್ನು ಫ್ರಾಂಚೈಸಿಗಳಿಗೆ ತಿಳಿಸಲಾಗಿತ್ತು. ಇದರ ನಡುವೆಯೂ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಕೆಎಂ ಆಸಿಫ್ ಬಯೋ ಬಬಲ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 6 ದಿನಗಳ ಕಾಲ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಇದೇ ರೀತಿ 2ನೇ ಬಾರಿ ಉಲ್ಲಂಘಿಸಿದರೆ 6 ದಿನಗಳ ಕಾಲ ಕ್ವಾರಂಟೈನ್ ಜತೆಗೆ ಒಂದು ಪಂದ್ಯ ನಿಷೇಧದ ಶಿಕ್ಷೆ ವಿಧಿಸಲಾಗುವುದು, 3ನೇ ಬಾರಿ ಉಲ್ಲಂಘಿಸಿದರೆ ಟೂರ್ನಿಯಿಂದಲೇ ಹೊರಹಾಕಲಾಗುತ್ತದೆ. ಆದರೆ, ಟೂರ್ನಿಗೆ ಸಂಬಂಧ ಇಲ್ಲದವರ ಜತೆ ಮಾತನಾಡಿದರೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದೆ.
ಕೇವಲ ಆಟಗಾರರಿಗೆ ಅಲ್ಲದೆ, ಅವರ ಕುಟುಂಬಸ್ಥರಿಗೆ ಹಾಗೂ ಫ್ರಾಂಚೈಸಿಗಳಿಗೂ ಈ ನಿಯಮ ಅನ್ವಯಿಸಿದೆ. ಟೂರ್ನಿಗೆ ಸಂಬಂಧ ಇಲ್ಲದ ವ್ಯಕ್ತಿಗಳನ್ನು ಫ್ರಾಂಚೈಸಿ ಕಡೆಯವರು ಮಾತನಾಡಿಸಿದರೆ ಒಂದು ಕೋಟಿ ರೂಪಾಯಿ ದಂಡ ಹಾಕಲಾಗುತ್ತಿದೆ. ಜತೆಗೆ ಆಟಗಾರರು ಪ್ರತಿ ದಿನ ಆರೋಗ್ಯ ತಪಾಸಣೆ, ಜಿಪಿಎಸ್ ಟ್ರ್ಯಾಕರ್ ಅಳವಡಿಸಿಕೊಳ್ಳದೆ ಇದ್ದರೆ, ಕೋವಿಡ್-19 ಟೆಸ್ಟ್‌ಗೆ ಹಾಜರಾಗದೆ ಇದ್ದರೆ 60 ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ.ಇದು ಆಟಗಾರರು ಕುಟುಂಬಸ್ಥರಿಗೂ ಅನ್ವಯಿಸುತ್ತದೆ. ಆಟಗಾರರು, ಸಹಾಯಕ ಸಿಬ್ಬಂದಿ ಪ್ರತಿ ಐದು ದಿನಕ್ಕೊಮ್ಮೆ ಕೋವಿಡ್-19 ಟೆಸ್ಟ್‌ಗೆ ಒಳಗಾಗಬೇಕು. ಜತೆಗೆ ಬಯೋ ಬಬಲ್ ನಿಯಮ ಉಲ್ಲಂಘಿಸದಂತೆ ತಂಡದ ಅಧಿಕಾರಿಗಳು ಎಚ್ಚರಿವಹಿಸಬೇಕೆಂದು ಹೇಳಲಾಗಿದೆ.
ದಂಡದ ನಿಯಮ ಇಂತಿದೆ...
ಆಟಗಾರರು, ಸಹಾಯಕ ಸಿಬ್ಬಂದಿ ಜತೆ ಇತರರೊಂದಿಗೆ ಮಾತನಾಡಿದರೆ, ಮೊದಲ ಬಾರಿ ಉಲ್ಲಂಘಿಸಿದರೆ 1 ಕೋಟಿ ರೂಪಾಯಿ ದಂಡ ಹಾಕಲಾಗುತ್ತದೆ. 2ನೇ ಬಾರಿ ಉಲ್ಲಂಘಿಸಿದರೆ ತಂಡದ ಅಂಕದಲ್ಲಿ ಒಂದು ಅಂಕ ಕಡಿತಗೊಳಿಸಲಾಗುತ್ತದೆ. ಮೂರನೇ ಬಾರಿ ಉಲ್ಲಂಘಿಸಿದರೆ 2 ಅಂಕ (ತಂಡದ ಒಂದು ಗೆಲುವು) ಕಡಿತಗೊಳಿಸಲಾಗುವುದು.