ಚೆನ್ನೈ ಸೂಪರ್ ಕಿಂಗ್ಸ್ ಆಟಗಾರನಿಂದ ಬಯೋಬಬಲ್ ನಿಯಮ ಉಲ್ಲಂಘನೆ...

km asif for web
Published on

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಕೆಎಂ ಆಸಿಫ್, ಬಯೋ ಬಬಲ್ ನಿಯಮ ಉಲ್ಲಂಘಿಸಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಅರಬ್‌ರಾಷ್ಟ್ರದಲ್ಲಿರುವ ಐಪಿಎಲ್ ತಂಡಗಳು ಬಯೋ ಬಬಲ್ ವಿಷಯವಾಗಿ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿವೆ. ಇದರ ನಡುವೆಯೂ ಚೆನ್ನೈ ಆಟಗಾರ ಆಯಾತಪ್ಪಿ ಬಯೋ ಬಬಲ್ ನಿಯಮ ಉಲ್ಲಂಸಿದ್ದಾರೆ. ಇದರಿಂದಾಗಿ 6 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ ಕಳುಹಿಸಲಾಗಿದೆ. ಐಪಿಎಲ್‌ನಲ್ಲಿ ಬಯೋ ಬಬಲ್ ನಿಯಮ ಉಲ್ಲಂಘನೆಯಾದ ಮೊದಲ ಪ್ರಕರಣ ಇದಾಗಿದೆ.

ವೇಗಿ ಕೆಎಂ ಆಸಿಫ್, ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘಿಸದಿದ್ದರೂ ಶಿಷ್ಟಾಚಾರ ಸೂಕ್ತವಾಗಿ ಪಾಲನೆಯಾಗಿಲ್ಲ. ಕೊಠಡಿಯ ಕೀ ತಪ್ಪಿದ್ದರಿಂದ, ರಿಸೆಪ್ಷನ್ ಬಳಿ ಹೊಸ ಕೀ ತರಲು ಹೋಗಿದ್ದೇ ಈ ಎಡವಟ್ಟಿಗೆ ಕಾರಣ. ಐಪಿಎಲ್-2020 ನಿಯಮ ಪ್ರಕಾರ, ಆಟಗಾರರು ಹೋಟೆಲ್‌ನ ರಿಸೆಪ್ಷನ್ ಏರಿಯಾಗೂ ಎಂಟ್ರಿ ಕೊಡುವಂತಿಲ್ಲ. ಆದರೆ, ಕೇರಳ ಕ್ರಿಕೆಟಿಗ ಆಕಸ್ಮಿಕವಾಗಿ ಈ ಏರಿಯಾ ಪ್ರವೇಶಿಸಿದ್ದಾರೆ. ಇದೊಂದು ಆಕಸ್ಮಿಕ ಘಟನೆಯಾಗಿದ್ದರೂ ಸುರಕ್ಷತಾ ವಲಯ ದಾಟಿದ ಹಿನ್ನೆಲೆಯಲ್ಲಿ ನಿಯಮ ಪಾಲಿಸಬೇಕಿದೆ. 6 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಕಡ್ಡಾಯವಾಗಿ ಇರಬೇಕಿದೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ.

27 ವರ್ಷದ ಕೇರಳ ಕ್ರಿಕೆಟಿಗ ಪ್ರಸಕ್ತ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಇನ್ನೂ ಕಣಕ್ಕಿಳಿದಿಲ್ಲ. ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ಪರ 2 ಪಂದ್ಯಗಳನ್ನಾಡಿದ್ದರು. ಬಯೋ ಬಬಲ್ ನಿಯಮ ಕುರಿತು ಟೂರ್ನಿ ಆರಂಭದಲ್ಲೇ ಎಲ್ಲ ಫ್ರಾಂಚೈಸಿಗಳಿಗೆ ಸೂಕ್ತವಾದ ಮಾರ್ಗಸೂಚಿ ನೀಡಲಾಗಿದೆ.

* ನಿಯಮ ಉಲ್ಲಂಘಸಿದರೆ ಶಿಕ್ಷೆ ಇಂತಿದೆ..

ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದರೆ, 6 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯವಿದ್ದು, ಯಾವುದೇ ಶಿಕ್ಷೆ ಇರುವುದಿಲ್ಲ. 2ನೇ ಬಾರಿ ನಿಯಮ ಉಲ್ಲಂಸಿದರೆ 6 ದಿನಗಳ ಕಾಲ ಕ್ವಾರಂಟೈನ್ ಜತೆಗೆ ಒಂದು ಪಂದ್ಯದಿಂದ ಅಮಾನತು ಮಾಡಲಾಗುತ್ತದೆ. ಮೂರನೇ ಬಾರಿಗೆ ನಿಯಮ ಉಲ್ಲಂಘಿಸಿದರೆ ಟೂರ್ನಿಯಿಂದಲೇ ಆಟಗಾರರನ್ನು ಅಮಾನತು ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net